- April 4, 2022
ನನ್ನ ನಟನಾ ಬದುಕಿಗೆ ತಿರುವು ನೀಡಿದ್ದು ಕನ್ನಡತಿ – ಮೊಹಿರಾ ಆಚಾರ್ಯ


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ
ಕನ್ನಡತಿಯಲ್ಲಿ ನಾಯಕಿ ಭುವಿಯ ತಂಗಿ ಬಿಂದು ಆಗಿ ನಟಿಸುತ್ತಿರುವ ಮೊಹಿರಾ ಆಚಾರ್ಯ ಭುವಿ ಪಾತ್ರದಷ್ಟೇ ಪ್ರೇಕ್ಷಕರಿಗೆ ಆತ್ಮೀಯರು. ಅಂದ ಹಾಗೇ ಕನ್ನಡತಿಯ ಬಿಂದು ಪಾತ್ರವನ್ನು ಇದುವರೆಗೂ ಎರಡು ಜನ ನಟಿಸಿದ್ದರು. ಈಗ ಮೊಹಿರಾ ಸರದಿ. ಮೂರನೆಯವರಾಗಿ ನಟಿಸುತ್ತಿರುವ ಮೊಹಿರಾ ಆಚಾರ್ಯ ಮುದ್ದಾದ ಮಾತು, ಮನೋಜ್ಞ ನಟನೆಯ ಮೂಲಕ ಕಿರುತೆರೆ ಪ್ರೇಕ್ಷಕರನ್ನು ಸೆಳೆದಿದ್ದಾರೆ.


ಮೊದಲಿನಿಂದಲೂ ಕಲೆಯ ವಿವಿಧ ಪ್ರಕಾರಗಳಾಗಿರುವ ಡ್ಯಾನ್ಸ್, ಡ್ರಾಯಿಂಗ್, ಪೇಯಿಂಟಿಂಗ್ ನಲ್ಲಿ ತುಂಬಾ ಆಸಕ್ತಿ. ಇಂಜಿನಿಯರಿಂಗ್ ಪದವಿ ಪಡೆದಿರುವ ಮೊಹಿರಾ ಬಾಲಿವುಡ್ ಡ್ಯಾನ್ಸ್ ಸ್ಟೈಲ್ ಕಲಿತಿದ್ದಾರೆ.


ಫಸ್ಟ್ ಪಿಯುಸಿ ಬಳಿಕ ಮಿತ್ರಸಂಗಮ ಇನ್ಸಿಟ್ಯೂಟ್ ನಲ್ಲಿ ಕೌಶಲ್ ಸರ್ ಬಳಿ ನಟನಾ ತರಬೇತಿ ಪಡೆದಿದ್ದಾರೆ. ಇದರ ನಂತರ ಶಾರ್ಟ್ ಮೂವಿ, ಕವರ್ ಸಾಂಗ್ ಮಾಡುತ್ತಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರೇಮಲೋಕ ಧಾರಾವಾಹಿ ಮೂಲಕ ಧಾರಾವಾಹಿ ಲೋಕಕ್ಕೆ ಪ್ರವೇಶಿಸಿದರು.


ಮುಂದೆ ಕನ್ನಡತಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂದಾಗ ಮೊಹಿರಾ ಆಚಾರ್ಯ ಅವರಿಗೆ ಸ್ವರ್ಗಕ್ಕೆ ಮೂರೇ ಗೇಣು. ನಟನೆಯಲ್ಲಿ ಅವಕಾಶಕ್ಕೆ ಕಾದಿದ್ದ ಮೊದಲನೇ ಧಾರಾವಾಹಿ ಶೂಟಿಂಗ್ ಪೂರ್ತಿ ಮಾಡಿದ ಎರಡನೇ ದಿನ ಈ ಆಫರ್ ಬಂದಾಗ ಆಕೆಗೆ ಸಹಜವಾಗಿ ಖುಷಿಯಾಯಿತು.


“ನಿರ್ದೇಶಕ ಯಶವಂತ್ ಅವರಿಂದ ತುಂಬಾ ಕಲಿತುಕೊಂಡರಂತೆ. ಕನ್ನಡತಿ ಧಾರಾವಾಹಿಯು ನನ್ನ ನಟನಾ ಬದುಕಿಗೆ ತಿರುವು ನೀಡಿದ ಧಾರಾವಾಹಿ ಹೌದು. ಬಿಂದು ಪಾತ್ರದಿಂದ ನನಗೆ ಸಾಕಷ್ಟು ಜನಪ್ರಿಯತೆ ದೊರೆತಿದೆ. ಜನ ಇಂದು ನನ್ನನ್ನು ಕನ್ನಡತಿಯ ಬಿಂದು ಎಂದೇ ಗುರುತಿಸುತ್ತಾರೆ. ಈಗಾಗಲೇ ಚಿತ್ರರಂಗದಿಂದಲೂ ಸಾಕಷ್ಟು ಆಫರ್ಸ್ ಬರುತ್ತಿದ್ದು ಸದ್ಯ ಕೋಟಿಪತಿ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದೇನೆ” ಎನ್ನುತ್ತಾರೆ ಮೊಹಿರಾ ಆಚಾರ್ಯ.




