- June 13, 2022
ಒಂದಲ್ಲ ಎರಡಲ್ಲ, ಹಲವು ಭಾಷೆಗಳಲ್ಲಿ ‘ಕಬ್ಜ’


ರಿಯಲ್ ಸ್ಟಾರ್ ಉಪೇಂದ್ರ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರು ಎರಡನೇ ಬಾರಿ ಜೊತೆಯಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಕಬ್ಜ’. ಪ್ರಖ್ಯಾತ ನಿರ್ದೇಶಕರಾದ ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ 1970ರ ದಶಕದ ಭೂಗತ ಲೋಕದ ಕಥೆಗಳನ್ನು ಹೇಳಲು ಹೊರಟಿದೆ. ಇದೊಂದು ಪಾನ್ ಇಂಡಿಯನ್ ಸಿನಿಮಾವಾಗಿದ್ದು ಝೆಡ್ ಎಲ್ಲ ಭಾಷೆಗಳ ಸ್ಟಾರ್ ಗಳೂ ಸಿನಿಮಾದ ತಾರಗಣದಲ್ಲಿರಲಿದ್ದಾರೆ. ಸುದೀಪ್ ಹಾಗೂ ಉಪೇಂದ್ರ ಅವರ ಜೊತೆ, ಶ್ರೀಯ ಶರಣ್, ಜಗಪತಿ ಬಾಬು, ಕಬೀರ್ ದುರ್ಹಾನ್ ಸಿಂಗ್, ಮುರಳಿ ಶರ್ಮ, ಪೊಸನಿ ಕೃಷ್ಣ ಮುರಳಿ, ಪ್ರಮೋದ್ ಶೆಟ್ಟಿ, ನವಾಬ್ ಶಾಹ್ ಮುಂತಾದವರು ಸಿನಿಮಾದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ಈ ಸಿನಿಮಾದ ಹೊಸ ಸುದ್ದಿಯೆಂದರೆ, ಚಿತ್ರ ಬರೋಬ್ಬರಿ ಒಂಬತ್ತು ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆಯಂತೆ.




ಪಾನ್ ಇಂಡಿಯಾ ಎಂದ ತಕ್ಷಣವೇ ಆ ಸಿನಿಮಾ, ಭಾರತದ ಪಂಚ ಪ್ರಮುಖ ಸಿನಿರಂಗಗಳ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಗುವುದು ಖಚಿತವಾಗುತ್ತದೆ. ಆದರೆ ನಿರ್ದೇಶಕ ಆರ್ ಚಂದ್ರು ಅವರು ಇವಷ್ಟೇ ಅಲ್ಲದೇ ಒರಿಸ್ಸಾದ ಒಡಿಯ ಹಾಗು ಮರಾಠಿ ಭಾಷೆಗಳಲ್ಲೂ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಗುಟ್ಟು ಬಿಟ್ಟುಕೊಟ್ಟಂತಹ ಚಂದ್ರು ಅವರು, ಕಬ್ಜ ಸಿನಿಮಾವನ್ನು ಭಾರತದ ಏಳು ಭಾಷೆಗಳ ಜೊತೆಗೆ ಚೈನೀಸ್ ಹಾಗು ಜಪಾನೀಸ್ ಭಾಷೆಗಳಲ್ಲೂ ತೆರೆಕಾಣಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಒಟ್ಟು ಒಂಬತ್ತು ಭಾಷೆಗಳಲ್ಲಿ ‘ಕಬ್ಜ’ ಸಿನಿಮಾವನ್ನು ಚಿತ್ರಮಂದಿರಗಳಿಗೆ ತರುವ ಭರದಲ್ಲಿದ್ದಾರೆ ನಿರ್ದೇಶಕ ಆರ್ ಚಂದ್ರು.




ಈಗಾಗಲೇ ‘ಮುಕುಂದ ಮುರಾರಿ’ ಸಿನಿಮಾದಿಂದ ಜನಮಾನಸದ ಮನಗೆದ್ದಿರುವ ಉಪೇಂದ್ರ ಹಾಗು ಸುದೀಪ್ ಅವರು ಮತ್ತೊಮ್ಮೆ ಜೊತೆಯಾಗಿ ನಟಿಸುತ್ತಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುತ್ತದೆ. ಚಿತ್ರೀಕರಣ ಬಹುಪಾಲು ಮುಗಿಸಿಕೊಂಡು ಇದೀಗ ಸಿನಿಮಾದ ಡಬ್ಬಿಂಗ್ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿ ಆಗಿದ್ದು, ಬಿಡುಗಡೆ ಯಾವಾಗ ಎಂದು ಕಾದುನೋಡಬೇಕಿದೆ.






