- May 30, 2022
ಮೆಂಟಲಿ ಚಾಲೆಂಜ್ಡ್ ಹುಡುಗನ ಪಾತ್ರದಲ್ಲಿ ನಟಿಸಲಿದ್ದಾರೆ ಜಯ್ ಡಿಸೋಜಾ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆಕಾಶದೀಪ ಧಾರಾವಾಹಿಯಲ್ಲಿ ನಾಯಕ ಆಕಾಶ್ ಆಗಿ ಅಭಿನಯಿಸಿದ್ದ ಜಯ್ ಡಿಸೋಜಾ ಮತ್ತೆ ಮರಳಿ ಬಂದಿದ್ದಾರೆ. ಆಕಾಶದೀಪ ಧಾರಾವಾಹಿಯ ನಂತರ ಎಲ್ಲೂ ಕಾಣಿಸಿಕೊಳ್ಳದ ಜಯ್ ಡಿಸೋಜಾ ಇದೀಗ ಕಂ ಬ್ಯಾಕ್ ಮಾಡಿದ್ದಾರೆ. ಆದರೆ ಕನ್ನಡ ಧಾರಾವಾಹಿಯಲ್ಲಿ ಅಲ್ಲ, ಬದಲಿಗೆ ತಮಿಳು ಧಾರಾವಾಹಿಯಲ್ಲಿ.


ಕನ್ನಡ ಕಿರುತೆರೆಯ ಜೊತೆಗೆ ತೆಲುಗು ಕಿರುತೆರೆಯಲ್ಲಿ ಮಿಂಚಿರುವ ಜಯ್ ಡಿಸೋಜಾ ಇದೀಗ ತಮಿಳು ಕಿರುತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮಿಳಿನ ಸಿಪಿಕ್ಕುಲ್ ಮುತ್ತು ಧಾರಾವಾಹಿಯಲ್ಲಿ ಜಯ್ ನಾಯಕರಾಗಿ ಮೋಡಿ ಮಾಡಿದ್ದಾರೆ.
ಸಿಪಿಕ್ಕುಲ್ ಮುತ್ತು ಧಾರಾವಾಹಿಯ ಪಾತ್ರದ ಬಗ್ಗೆ ಮಾತನಾಡಿರುವ ಜಯ್ ಡಿಸೋಜಾ “ಇದು ನಿಜವಾಗಿಯೂ ತುಂಬಾ ಚಾಲೆಂಜಿಗ್ ಆಗಿರುವಂತಹ ಪಾತ್ರ. ಇದೇ ಮೊದಲ ಬಾರಿಗೆ ನಾನು ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನ. ಶ್ರೀಮಂತ ಮನೆತನದ ಮೆಂಟಲಿ ಚಾಲೆಂಜ್ಡ್ ಯುವಕನಾಗಿ ನಾನು ನಟಿಸುತ್ತಿದ್ದೇನೆ” ಎಂದು ಹೇಳುತ್ತಾರೆ.
ಪ್ರತಿ ಬಾರಿಯೂ ಭಿನ್ನ ಪಾತ್ರದ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಕಾರವಾರದ ಹ್ಯಾಂಡ್ ಸಮ್ ಹುಡುಗ ಜಯ್ ಡಿಸೋಜಾ ಆಕಸ್ಮಿಕವಾಗಿ ನಟನೆಗೆ ಬಂದು ಇಲ್ಲಿ ಬದುಕು ರೂಪಿಸಿಕೊಂಡಾತ. ಜಯ್ ಡಿಸೋಜಾ ಅವರಿಗೆ ಬಾಲ್ಯದಲ್ಲಿ ಪೈಲಟ್ ಆಗಬೇಕು ಎಂಬ ಆಸೆಯಿತ್ತು. ಅಚಾನಕ್ ಆಗಿ ದೊರೆತ ಅವಕಾಶದಿಂದ ನಟನೆಗೆ ಕಾಲಿಟ್ಟ ಈತ ಇಂದು ಕನ್ನಡದ ಜೊತೆಗೆ ಪರಭಾಷೆ ಕಿರುತೆರೆಯ ವೀಕ್ಷಕರ ಪಾಲಿನ ಚಾಕಲೇಟ್ ಹೀರೋ.
ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಮಾಡೆಲಿಂಗ್ ನತ್ತ ಆಸಕ್ತಿ ಬೆಳೆಸಿಕೊಂಡ ಜಯ್ ಡಿಸೋಜಾ ಒಂದಷ್ಟು ಫ್ಯಾಷನ್ ಶೋಗಳಲ್ಲಿ ಹೆಜ್ಜೆ ಹಾಕಿದರು. ಬೆರಳೆಣಿಕೆಯಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮೋಡಿ ಮಾಡಿರುವ ಈತ ನಂತರ ನಟನಾಗಬೇಕು ಎಂದು ಬಯಸಿದರು.


ಮುಂಬೈಯ ಅನುಪಮ್ ಖೇರ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನೆಗೆ ಸಂಬಂಧ ಪಟ್ಟ ತರಬೇತಿ ಪಡೆದು ಬಂದ ಜಯ್ ಆಡಿಶನ್ ಗಳನ್ನು ಅಟೆಂಡ್ ಮಾಡಲಾರಂಭಿಸಿದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರಾವಾಹಿಯಲ್ಲಿ ನಾಯಕ ಸೂರ್ಯ ಆಗಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ ಜಯ್ ಡಿಸೋಜಾ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.
ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪವಿತ್ರ ಬಂಧನಂ ನಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಗೆ ಪಾದಾರ್ಪಣೆ ಮಾಡಿದ ಜಯ್ ಡಿಸೋಜಾ ಈಟಿವಿ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅದಡೇ ಅಧರಂ ಧಾರಾವಾಹಿಯಲ್ಲಿ ನಟಿಸಿದರು. ಮುಂದೆ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಲ್ಯಾಣಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಮೂರು ವರ್ಷಗಳ ಸುದೀರ್ಘ ಗ್ಯಾಪ್ ನ ನಂತರ ಕನ್ನಡ ಕಿರುತೆರೆಯತ್ತ ಮುಖ ಮಾಡಿದ ಜಯ್ ಡಿಸೋಜಾ ಆಕಾಶದೀಪ ಧಾರಾವಾಹಿಯ ಆಕಾಶ್ ಆಗಿ ಸೈ ಎನಿಸಿಕೊಂಡರು. ಮಾತ್ರವಲ್ಲ ಇದರ ಜೊತೆಗೆ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಹಂಸಗೀತಂನಲ್ಲಿ ನಾಯಕ ರಾಹುಲ್ ಆಗಿ ಅಭಿನಯಿಸಿದ್ದು ತಮ್ಮ ನಟನಾ ಕೆರಿಯರ್ ನಲ್ಲಿ ಮೊದಲ ಬಾರಿಗೆ ಇನ್ಸ್ ಪೆಕ್ಟರ್ ಆಗಿ ಮಿಂಚಿದರು.
ಇದೀಗ ತಮಿಳು ಕಿರುತೆರೆಯಲ್ಲಿ ಕಮಾಲ್ ಮಾಡಲಿರುವ ಜಯ್ ಡಿಸೋಜಾ ಅವರಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.