• July 8, 2022

ಟಿವಿ ಪರದೆ ಮೇಲೆ ಬರುತ್ತಿದೆ ‘ಜೇಮ್ಸ್’

ಟಿವಿ ಪರದೆ ಮೇಲೆ ಬರುತ್ತಿದೆ ‘ಜೇಮ್ಸ್’

ಬೆಳ್ಳಿತೆರೆ ಮೇಲೆ ನಮ್ಮ ‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾಯಕನಾಗಿ ಕೊನೆಯ ಬಾರಿ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಕನ್ನಡಿಗರ ಮನೆ-ಮನಗಳ ರಾಜಕುಮಾರ ಅಪ್ಪು ನಮ್ಮನ್ನ ಅಗಲಿ ಇಂದಿಗೆ ವರುಷವೇ ಕಳೆಯುತ್ತ ಬಂದರೂ, ನಮ್ಮ ನಡುವೆಯೇ ಅವರಿದ್ದಾರೆ ಎಂಬ ನಂಬಿಕೆ ಎಷ್ಟೋ ಜನರ ಮನದಲ್ಲಿದೆ. ‘ಜೇಮ್ಸ್’ ಸಿನಿಮಾ ಕೂಡ ಹಾಗೆಯೇ. ಬಿಡುಗಡೆಯಾಗಿ ಸುಮಾರು ನಾಲ್ಕು ತಿಂಗಳು ಕಳೆದರೂ ಅದರ ಮೇಲಿದ್ದ ಕ್ರೇಜ್ ಹಾಗೆಯೇ ಇದೆ. 2022ರ ಮೊದಲ ನೂರು ಕೋಟಿ ಕ್ಲಬ್ ನ ಚಿತ್ರ ಎಂಬ ಪಟ್ಟ ಗಳಿಸದ್ದ ಈ ಸಿನಿಮಾ ಇದೀಗ ಕಿರಿಪರದೆಯ ಮೇಲೆ ರಾರಾಜಿಸಲು ಬರುತ್ತಿದೆ.

ಪುನೀತ್ ರಾಜಕುಮಾರ್ ಜನುಮದಿನವಾದ ಮಾರ್ಚ್ 17ರಂದು ತೆರೆಕಂಡಿದ್ದ ಈ ಸಿನಿಮಾ ಹಲವು ದಿನಗಳ ಕಾಲ ಹೌಸ್ಫುಲ್ ಬೋರ್ಡ್ ಜೋತು ಹಾಕಿಕೊಂಡಿತ್ತು. ಚೇತನ್ ಕುಮಾರ್ ಅವರು ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ಕಿಶೋರ್ ಪಾತಿಕೊಂಡ ಅವರು ಯಾವುದೇ ನ್ಯೂನತೆ ಇಲ್ಲದಂತೆ ನಿರ್ಮಾಣ ಮಾಡಿದ್ದರು. ಈಗಾಗಲೇ ‘ಸೋನಿ ಲಿವ್’ ನಲ್ಲಿ ಒಟಿಟಿ ಪರದೆ ಏರಿರುವ ‘ಜೇಮ್ಸ್’ ಇದೀಗ ದೂರದರ್ಶನಗಳಲ್ಲಿ ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ. ಈ ಹಕ್ಕು ‘ಸ್ಟಾರ್ ಸುವರ್ಣ’ ವಾಹಿನಿಯದ್ದು. ಇದೇ ಜುಲೈ 17ರಂದು, ಸಿನಿಮಾ ಬಿಡುಗಡೆ ಕಂಡು ಸರಿಯಾಗಿ ನಾಲ್ಕು ತಿಂಗಳ ನಂತರ, ಸಂಜೆ 5:30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೊಟ್ಟಮೊದಲ ಬಾರಿಗೆ ಟಿವಿ ಪರದೆ ಮೇಲೆ ‘ಜೇಮ್ಸ್’ ಬರುತ್ತಿದೆ. ಈ ವಿಷಯ ಅಭಿಮಾನಿಗಳ ಸಂತಸವನ್ನು ಮುಗಿಲು ಮುಟ್ಟಿಸಿದೆ.

ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಧ್ವನಿ ನೀಡಲು ಅಪ್ಪು ನಮ್ಮ ಜೊತೆ ಇರಲಿಲ್ಲ. ಹಾಗಾಗಿ ಮೊದಲು ಶಿವಣ್ಣನವರ ಧ್ವನಿಯಲ್ಲಿ ಸಿನಿಮಾ ಬಿಡುಗಡೆ ಮಾಡಲಾಯಿತು. ಇದನ್ನೂ ಒಪ್ಪಿಕೊಂಡು ಜನ ‘ಜೇಮ್ಸ್’ ಜಾತ್ರೆಗೈದಿದ್ದರು. ನಂತರ ತಂತ್ರಜ್ಞಾನದ ಮೂಲಕ ಪುನೀತ್ ರಾಜಕುಮಾರ್ ಅವರ ಧ್ವನಿಯನ್ನು ಮರಳಿ ತಂದು, ಅವರ ಧ್ವನಿಯಲ್ಲೇ ಚಿತ್ರವನ್ನ ಪ್ರದರ್ಶನ ಮಾಡಲಾಯಿತು. ಇದಕ್ಕೂ ಸಹ ಅಪ್ಪು ಅಭಿಮಾನಿಗಳು ಸಾಲುಸಾಲಾಗಿ ಚಿತ್ರಮಂದಿರ ಸೇರಿದ್ದರು. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅಪ್ಪು ಧ್ವನಿಯಲ್ಲಿಯೇ ಸಿನಿಮಾ ನೋಡಲು ಸಾಧ್ಯವಾಗುತ್ತಿದೆ. ಇದೇ ಜುಲೈ 17ರಂದು ಸಂಜೆ 5:30ಕ್ಕೆ ‘ಜೇಮ್ಸ್’ ಅಪ್ಪು ಧ್ವನಿಯಲ್ಲಿಯೇ ಕಣ್ತುಂಬಿಕೊಳ್ಳಬಹುದಾಗಿದೆ.