• March 6, 2022

ಡೆಸ್ಟಿನೇಷನ್ ವೆಡ್ಡಿಂಗ್ ನ ಶೂಟಿಂಗ್ ಮಾಡುವುದು ಸುಲಭವಲ್ಲ – ಜಗನ್

ಡೆಸ್ಟಿನೇಷನ್ ವೆಡ್ಡಿಂಗ್ ನ ಶೂಟಿಂಗ್ ಮಾಡುವುದು ಸುಲಭವಲ್ಲ – ಜಗನ್

ಕನ್ನಡ ಕಿರುತೆರೆಯಲ್ಲಿ ಮೊದಲ ಬಾರಿಗೆ ಧಾರಾವಾಹಿಯೊಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಮದುವೆ ಶೂಟಿಂಗ್ ಅನ್ನು ಗೋವಾದಲ್ಲಿ ಮಾಡಿದೆ. ಹೌದು ಲಕ್ಷಣ ಧಾರಾವಾಹಿ ಭೂಪತಿಯ ಮದುವೆ ವಿಶೇಷ ಎಪಿಸೋಡ್ ಬರಲಿದ್ದು ಗೋವಾದಲ್ಲಿ ಮದುವೆ ಚಿತ್ರೀಕರಣ ಪೂರ್ಣಗೊಂಡಿದೆ. ಗೋವಾದಲ್ಲಿ 4 ದಿನಗಳ ಚಿತ್ರೀಕರಣ ಮಾಡಿರುವ ತಿಂಡಿ ಈಗ ಬೆಂಗಳೂರಿನಲ್ಲಿ ಉಳಿದ ಶೆಡ್ಯೂಲ್ ಶೂಟಿಂಗ್ ಪೂರ್ಣಗೊಳಿಸುತ್ತಿದೆ.

ಇದರ ಬಗ್ಗೆ ಮಾತನಾಡಿರುವ ಲಕ್ಷಣ ಧಾರಾವಾಹಿಯ ನಾಯಕ, ನಿರ್ಮಾಪಕ ಹಾಗೂ ಕ್ರಿಯೇಟಿವ್ ನಿರ್ದೇಶಕ ಜಗನ್ “ಡೆಸ್ಟಿನೇಷನ್ ವೆಡ್ಡಿಂಗ್ ನ ಶೂಟಿಂಗ್ ಮಾಡುವುದು ಸುಲಭದ ಕಾರ್ಯವಲ್ಲ. ಕಲಾವಿದರಿಂದ ಹಿಡಿದು ತಾಂತ್ರಿಕ ವರ್ಗದವರು, ಪ್ರತಿಯೊಬ್ಬರೂ ಚುರುಕಾಗಿ ಇರಬೇಕು. ಮದುವೆ ಈ ಕಥೆಯಲ್ಲಿ ಪ್ರಮುಖ ತಿರುವು ತರುತ್ತದೆ. ಪ್ರೇಕ್ಷಕರು ಭೂಪತಿ ನಕ್ಷತ್ರಾ ಅಥವಾ ಶ್ವೇತಾಳನ್ನು ಮದುವೆಯಾಗುತ್ತಾನೆಯೇ ಎಂದು ತಿಳಿಯಲು ಕಾತುರರಾಗಿದ್ದಾರೆ. ಹೀಗಾಗಿ ಇದು ವಿಶೇಷವಾದುದು”ಎಂದಿದ್ದಾರೆ.

“ರಾಧಾ ರಮಣ, ಅಗ್ನಿಸಾಕ್ಷಿ , ಲಕ್ಷ್ಮಿ ಬಾರಮ್ಮ ಧಾರಾವಾಹಿಗಳನ್ನು ನೋಡುವುದಾದರೆ ಅವರೆಲ್ಲರೂ ಮದುವೆಯಾಗಿ ಪಯಣ ಆರಂಭಿಸಿದರು. ಆದರೆ ಲಕ್ಷಣವನ್ನು ಹೋಲಿಕೆ ಮಾಡಿದರೆ ಇದು ಸಂಪೂರ್ಣ ವಿಭಿನ್ನವಾದ ಕಥೆಯಾಗಿದೆ. ಗೆಳೆತನ, ಪ್ರಪೋಸಲ್ ಹಾಗು ಎಲ್ಲವೂ ಹೀರೋ ಮದುವೆಯಾದಾಗ ಕಥೆ ಒಂದು ಹಂತಕ್ಕೆ ಬಂದು ತಲುಪುತ್ತದೆ. ನಿಜವಾದ ಕಥೆ ಇಲ್ಲಿಂದಲೇ ಆರಂಭವಾಗುತ್ತದೆ. ನಾನು ಕಥೆಯ ಮೊದಲ ದಿನದಿಂದಲೇ ಭಾಗವಾಗಿರುವುದರಿಂದ ಮದುವೆ ಸೀಕ್ವೆನ್ಸ್ ನಲ್ಲಿ ಏನಾದರೂ ಕುತೂಹಲಕಾರಿಯಾಗಿರುವುದನ್ನು ತಲುಪಿಸಬೇಕೆಂದು ಕಾತರನಾಗಿದ್ದೆ. ಸಾಮಾನ್ಯವಾಗಿ ಮಾಡುವ ಹಾಲ್ ಅಥವಾ ರೆಸಾರ್ಟ್ ನಲ್ಲಿ ಚಿತ್ರೀಕರಣ ಮಾಡುವುದು ನನಗೆ ಓಕೆ ಆಗಿರಲಿಲ್ಲ. ಹೊಸತನ್ನು ಮಾಡಬೇಕೆಂದು ಬಯಸಿದೆ” ಎಂದಿದ್ದಾರೆ.

ಡೆಸ್ಟಿನೇಷನ್ ವೆಡ್ಡಿಂಗ್ ಎಂಬ ವಿಚಾರ ಬಂದಾಗ ಬೇರೇನೂ ಯೋಚಿಸದ ಜಗನ್ ” ಡೆಸ್ಟಿನೇಷನ್ ವೆಡ್ಡಿಂಗ್ ಬಗ್ಗೆ ಮಾತನಾಡುವಾಗ ನನಗೆ ಮೊದಲಿಗೆ ಹೊಳೆದ ಜಾಗ ಗೋವಾ. ಕನ್ನಡ ಕಿರುತೆರೆಯಲ್ಲಿ ಯಾರೂ ಡೆಸ್ಟಿನೇಷನ್ ವೆಡ್ಡಿಂಗ್ ಸೀಕ್ವೆನ್ಸ್ ಮಾಡಿಲ್ಲ. ಗೋವಾದಲ್ಲಿ ಅಂತೂ ಮಾಡಿಲ್ಲ. ನಾವು ಬೇಗನೆ ಡೆಸ್ಟಿನೇಷನ್ ವೆಡ್ಡಿಂಗ್ ದೃಶ್ಯಗಳ ಮೇಲೆ ಕೆಲಸ ಮಾಡಿದೆವು. ತಂಡದೊಂದಿಗೆ ಗೋವಾಕ್ಕೆ ತೆರಳಿದೆವು. ಗೋವಾದಲ್ಲಿ ಗಾಲ್ಫ್ ಕೋರ್ಸ್ ನಲ್ಲಿ ಶೂಟಿಂಗ್ ಮಾಡಿದ್ದೇವೆ. ಬೀಚ್ ಏರಿಯಾ , ರೆಸಾರ್ಟ್ ಸೇರಿದಂತೆ ಹಲವು ಬೇರೆ ಬೇರೆ ಸ್ಥಳಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ಪ್ರತಿಯೊಬ್ಬರೂ ಸಂಪೂರ್ಣ ಶ್ರಮ ಹಾಕಿದ್ದಾರೆ. ಗೋವಾ ಯಾವ ಸ್ಥಳಕ್ಕೂ ಕಡಿಮೆ ಇಲ್ಲ. ಇದು ಡೆಸ್ಟಿನೇಷನ್ ವೆಡ್ಡಿಂಗ್ ಗೆ ಉತ್ತಮ ಸ್ಥಳವಾಗಿದೆ. ಇತ್ತೀಚೆಗೆ ಗೋವಾದಲ್ಲಿ ಹಲವು ಮದುವೆಗಳು ನಡೆಯುತ್ತಿವೆ. “ಎಂದಿದ್ದಾರೆ.

“ಲಕ್ಷಣ ಧಾರಾವಾಹಿ ವೀಕ್ಷಕರ ನಿರೀಕ್ಷೆಯನ್ನು ಈಡೇರಿಸುತ್ತದೆ. ನಾವು ಅತ್ಯುತ್ತಮವಾದುದನ್ನು ನೀಡಲು ನಮ್ಮ ಪ್ರಯತ್ನ ಮಾಡುತ್ತೇವೆ. ವೆಡ್ಡಿಂಗ್ ಸೀಕ್ವೆನ್ಸ್ ನನ್ನು ವೀಕ್ಷಕರು ಇಷ್ಟಪಡುತ್ತಾರೆ ಎಂದು ನಂಬಿದ್ದೇನೆ”ಎಂದಿದ್ದಾರೆ ಜಗನ್.