- April 12, 2022
ಐಶಾನಿ ಶೆಟ್ಟಿ ಹೊಸ ಹೆಜ್ಜೆ


ಮುದ್ದಾದ ನೋಟ, ಮನೋಜ್ಞ ನಟನೆಯ ಮೂಲಕ ಸಿನಿ ಪ್ರಿಯರ ಮನ ಸೆಳೆದಿರುವ ಕರಾವಳಿ ಕುವರಿ ಐಶಾನಿ ಶೆಟ್ಟಿ ಕಿರು ಚಿತ್ರ “ಕಾಜಿ” ಮೂಲಕ ನಿರ್ದೇಶಕಿಯಾಗಿ ಭಡ್ತಿ ಪಡೆದಿದ್ದರು. ಮೊದಲ ಬಾರಿಗೆ ನಿರ್ದೇಶಕಿಯಾಗಿ ಸೈ ಎನಿಸಿಕೊಂಡಿರುವ ಐಶಾನಿ ಶೆಟ್ಟಿ ಈಗ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.


“ನಾನು ಸದ್ಯ ಚಿತ್ರಕಥೆ ಬರೆಯುತ್ತಿದ್ದೇನೆ. ಈ ವರ್ಷವೇ ಸೆಟ್ಟೇರಲಿದೆ. ಇದು ಸ್ವಲ್ಪ ಸಮಯದಿಂದ ನನ್ನ ಮನದಲ್ಲಿದೆ. ಈ ಹಿಂದೆ ನಾನು ಕಾಜಿ ಎಂಬ ಚಿತ್ರ ನಿರ್ದೇಶಿಸಿದೆ. ನಾನು ಭವಿಷ್ಯದಲ್ಲಿ ಅದನ್ನು ಅನುಸರಿಸಬೇಕೆಂದು ಹಲವರು ಬಯಸಿದ್ದರು. ನನ್ನ ಮನಸಿಗೆ ಹತ್ತಿರವಾದುದನ್ನು ಹೇಳಲು ಸಮಯ ತೆಗೆದುಕೊಂಡೆ” ಎಂದಿದ್ದಾರೆ.


ಇನ್ನು ಸಿನಿಮಾದ ಬಗ್ಗೆ ಮಾತನಾಡಿರುವ ಐಶಾನಿ “ನನ್ನ ಊರಿನಲ್ಲಿಯೇ ಈ ಸಿನಿಮಾ ಸೆಟ್ಟೇರಲಿದೆ. ಮಂಗಳೂರಿನ ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿದೆ. ಮಹಿಳೆಯರು ಎದುರಿಸುವ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಿದೆ. ನನ್ನ ಪಾತ್ರದ ಮೂಲಕ ಇದನ್ನು ತಿಳಿಸಲಿದ್ದೇನೆ. ಸಿನಿಮಾದ ವ್ಯಾಪ್ತಿಯ ಮೂಲಕ ಪ್ರಮುಖ ಸಮಸ್ಯೆಗಳನ್ನು ನಿರೂಪಿಸಲು ಸಿನಿಮಾ ಬಳಸಬೇಕು ಎಂದು ನಾನು ಬಲವಾಗಿ ನಂಬುತ್ತೇನೆ” ಎಂದಿದ್ದಾರೆ.


ಐಶಾನಿ ಅಭಿನಯದ ಹೊಂದಿಸಿ ಬರೆಯಿರಿ ಹಾಗೂ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇವೆ. ಕೆಲವು ಉತ್ತಮ ಕಥೆಗಳನ್ನು ಕೇಳಿದ್ದು ಸದ್ಯದಲ್ಲಿಯೇ ಫೈನಲ್ ಕೂಡಾ ಮಾಡಲಿದ್ದಾರೆ.


“ಒಬ್ಬ ನಟ ನಿರ್ದೇಶನ ಮಾಡುತ್ತಿದ್ದಾರೆ ಎಂದರೆ ನಟನೆಗೆ ಸಮಯ ಇರುವುದಿಲ್ಲ ಎಂದು ಜನ ತಿಳಿದುಕೊಳ್ಳುತ್ತಾರೆ. ಆದರೆ ನಾನು ಸಿನಿಮಾ ನಟನೆಯಲ್ಲಿ ಮುಂದುವರಿಯುತ್ತೇನೆ ಜೊತೆಗೆ ನನ್ನ ಪ್ಯಾಶನ್ ಜೊತೆ ಜೊತೆಗೆ ಕಲಿಯುತ್ತೇನೆ ಎಂದು ಸ್ಪಷ್ಟನೆ ನೀಡುತ್ತೇನೆ” ಎಂದಿದ್ದಾರೆ.






