- May 10, 2022
ಕನ್ನಡದ ಮಾರ್ಗರೇಟ್ ಇಂಚರ


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಾಯಕಿ ಇಂಚರಾ ಆಗಿ ಅಭಿನಯಿಸುತ್ತಿರುವ ಕೌಸ್ತುಭಮಣಿ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಸುವರ್ಣಾವಕಾಶ ಪಡೆದ ಅದೃಷ್ಟವಂತೆ. ಇಂಚರಾ ಆಗಿ ವೀಕ್ಷಕರ ಮನ ಸೆಳೆದಿರುವ ಕೌಸ್ತುಭಮಣಿಗೆ ಬಾಲ್ಯದಿಂದಲೂ ನಟನೆಯತ್ತ ವಿಶೇಷ ಆಸಕ್ತಿ ಇದ್ದುದಂತೂ ನಿಜ.


ನಟನೆ ಎಂದರೇನು, ಅದರ ರೀತಿ ರಿವಾಜುಗಳೇನು ಎಂಬ ಅರಿವು ಇರದಿದ್ದ ಕಾರಣ ನಟನೆಯಿಂದ ದೂರವಿದ್ದರು ಕೌಸ್ತುಭಮಣಿ. ಆದರೆ ಅದೃಷ್ಟ ದೇವತೆ ಆಕೆಯ ಪರ ಇದ್ದಳೇನೋ? ನಟನೆಗೆ ಕಾಲಿಡುವ ಅವಕಾಶ ತನ್ನಿಂದಾನೇ ಆಕೆಗೆ ದೊರಕಿತು. ಕಲರ್ಸ್ ಕನ್ನಡ ವಾಹಿನಿಯಿಂದ ಬಂದ ಕರೆ ಬಣ್ಣದ ಬದುಕಿನಲ್ಲಿ ಆಕೆ ನೆಲೆಗಾಣುವಂತೆ ಮಾಡಿತು.


ಮುಂದೆ ಇಂಚರಾ ಆಗಿ ಬದಲಾದ ಕೌಸ್ತುಭಮಣಿ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದರು. ತದ ನಂತರ ಸ್ಯಾಂಡಲ್ ವುಡ್ ಗೆ ಹಾರಿದ ಈಕೆ ಮಾರ್ಗರೇಟ್ ಆಗಿ ಹಿರಿತೆರೆಯಲ್ಲಿ ಮೋಡಿ ಮಾಡಲಿದ್ದಾರೆ. ಯುವ ನಟ ತೇಜ್ ನಟಿಸಿ, ನಿರ್ದೇಶನ ಮಾಡಿರುವ ರಾಮಾಚಾರಿ 2.0 ಸಿನಿಮಾದಲ್ಲಿ ಮಾರ್ಗರೇಟ್ ಆಗಿ ಅಭಿನಯಿಸುವ ಮೂಲಕ ಹಿರಿತೆರೆಯಲ್ಲಿ ಹೊಸ ಇನ್ನಿಂಗ್ಸ್ ಕೂಡಾ ಶುರು ಮಾಡಿದ್ದಾರೆ ಕೌಸ್ತುಭಮಣಿ.




“ರಾಮಾಚಾರಿ” ಹಾಗೂ “ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ” ಸಿನಿಮಾಗಳಲ್ಲಿ ರಾಮಾಚಾರಿ ಹೊರತಾಗಿ ನೆನಪಿನಲ್ಲಿ ಉಳಿಯುವ ಪಾತ್ರಗಳು ಎಂದರೆ ಅದು ಮಾರ್ಗರೇಟ್. ಜನರ ಮನಸ್ಸಿನಲ್ಲಿ ಇಂದಿಗೂ ಮಾರ್ಗರೇಟ್ ಪಾತ್ರ ಹಸಿರಾಗಿದೆ. ಇನ್ನು ನನಗೂ ಸಿನಿಮಾ ಕ್ಷೇತ್ರದಿಂದ ಅವಕಾಶಗಳು ಬರುತ್ತಿತ್ತು. ರಾಮಾಚಾರಿ 2.0 ನಲ್ಲಿನ ಮಾರ್ಗರೇಟ್ ಪಾತ್ರ ಹಾಗೂ ಹೆಸರು ಕೇಳಿದ್ದೆ ಅಸ್ತು ಎಂದೆ. ನನ್ನ ಪ್ರಕಾರ ನಾನು ಚಂದನವನ ಪ್ರವೇಶಿಸುವುದಕ್ಕೆ ಇದು ಹೇಳಿ ಮಾಡಿಸಿದ ಸಿನಿಮಾ ಎಂದೆನಿಸಿತು” ಎಂದು ಸಿನಿಮಾಕ್ಕೆ ಕಾಲಿಟ್ಟ ಸಮಯದಲ್ಲಿ ಹೇಳಿಕೊಂಡಿದ್ದರು ಕೌಸ್ತುಭಮಣಿ.




ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಕೌಸ್ತುಭಮಣಿ ಇದೀಗ ಮಗದೊಂದು ಸಿಹಿ ಸುದ್ದಿ ನೀಡಿದ್ದಾರೆ. ಅದೇನೆಂದರೆ ನಿಮ್ಮ ನೆಚ್ಚಿನ ಇಂಚರಾ ಪರಭಾಷೆಯ ಕಿರುತೆರೆಗೆ ಕಾಲಿಟ್ಟಿದ್ದಾರೆ. ಜೀ ತೆಲುಗು ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಕೋಡಲ್ಲು ಮೀಕು ಜೋಹರ್ಲು ನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ಧಾರಾವಾಹಿಯ ಪ್ರೊಮೋ ಕೂಡಾ ರಿಲೀಸ್ ಆಗಿದ್ದು ಕೌಸ್ತುಭಮಣಿ ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.






