• June 11, 2022

ತಮ್ಮ ಮುಂದಿನ ಸಿನಿಮಾ ಘೋಷಿಸಿದ ‘ಹೊಂಬಾಳೆ ಫಿಲಂಸ್’

ತಮ್ಮ ಮುಂದಿನ ಸಿನಿಮಾ ಘೋಷಿಸಿದ ‘ಹೊಂಬಾಳೆ ಫಿಲಂಸ್’

ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲಂಸ್’ ಸದ್ಯ ಜಗದ್ವಿಖ್ಯಾತವಾಗಿದೆ. ವಿಜಯ್ ಕಿರಗಂದೂರ್ ಅವರ ಸಾರಥ್ಯದಲ್ಲಿ ಓಡುತ್ತಿರುವ ಈ ಸಂಸ್ಥೆ, ತನ್ನ ಸಿನಿಮಾಗಳಿಗೆ ದೇಶ-ವಿದೇಶಗಳಲ್ಲೂ ಪ್ರೇಕ್ಷಕರು ಕಾಯುವಂತೆ ಮಾಡಿದೆ. ‘ಕೆಜಿಎಫ್’ನ ಸರಣಿ ಸಿನಿಮಾಗಳನ್ನು ಅದ್ದೂರಿಯಾಗಿ ಪೂರ್ಣಗೊಳಿಸಿ, ಯಶಸ್ಸು ಕಂಡು ಎಲ್ಲರ ಮೆಚ್ಚುಗೆಗೆ ಭಾಜನರಾಗಿದ್ದಾರೆ. ಸದ್ಯ ‘ಹೊಂಬಾಳೆ’ ತಮ್ಮ ಮುಂದಿನ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

‘ಹೊಂಬಾಳೆ ಫಿಲಂಸ್’ ಇದೀಗ ಕನ್ನಡ ಮಾತ್ರವಲ್ಲದೆ ಬೇರೆಭಾಷೆಯ ಚಿತ್ರರಂಗಗಳಿಂದಲೂ ಪಾನ್-ಇಂಡಿಯನ್ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಅವರು ಇಟ್ಟಂತಹ ಮೊದಲ ಹೆಜ್ಜೆಯೇ ಈ ಹೊಸ ಚಿತ್ರ. ಮಲಯಾಳಂನ ಸ್ಟಾರ್ ನಟ ಹಾಗು ನಿರ್ದೇಶಕರಾದಂತಹ ಪೃಥ್ವಿರಾಜ್ ಸುಕುಮಾರನ್ ಅವರ ಜೊತೆಗೆ ‘ಹೊಂಬಾಳೆ ಫಿಲಂಸ್’ ತನ್ನ ಮುಂದಿನ ಸಿನಿಮಾಗಾಗಿ ಕೈಜೋಡಿಸಿದೆ. ಮುರಳಿ ಗೋಪಿ ಅವರು ಬರೆದಿರುವ ಕಥೆಯೊಂದನ್ನು ಪೃಥ್ವಿರಾಜ್ ಸುಕುಮಾರನ್ ಅವರು ನಿರ್ದೇಶಿಸಿ, ಅವರೇ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ಇದು ಪೃಥ್ವಿರಾಜ್ ಸುಕುಮಾರನ್ ಅವರು ನಿರ್ದೇಶಸಲಿರುವ ನಾಲ್ಕನೇ ಸಿನಿಮಾ ಆಗಿರಲಿದೆ. ಈ ಸಿನಿಮಾಗೆ ‘ಟೈಸನ್(Tyson)’ ಎಂದು ಹೆಸರಿಡಲಾಗಿದ್ದು ಇಂದು (ಜೂನ್ 10) ಸಿನಿಮಾವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಹೊರಗೆ ತಂದಿದ್ದಾರೆ.

ಪೋಸ್ಟರ್ ನಲ್ಲಿ’ಟೈಸನ್’ ಎನ್ನುವ ಶೀರ್ಷಿಕೆಯ ಕೆಳಗೆ ‘The bell wont save you’ ಎಂದು ಬರೆಯಲಾಗಿದೆ. ಇದೊಂದು ಕಾನೂನು ಬಗೆಗಿನ ಕಥೆಯಾಗಿರಲಿದೆಯೇನೋ ಎಂಬ ಸುಳಿವುಗಳನ್ನು ಪೋಸ್ಟರ್ ಹೇಳಿದಂತಿದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗು ಹಿಂದಿ ಸೇರಿ ಒಟ್ಟು ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸದ್ಯ ಹೊಂಬಾಳೆ ಸಂಸ್ಥೆ ಹಾಗು ಪೃಥ್ವಿರಾಜ್ ಸುಕುಮಾರನ್ ಇಬ್ಬರೂ ಕೂಡ ಬೇರೆ ಬೇರೆ ಯೋಜನೆಗಳಲ್ಲಿ ಬ್ಯುಸಿಯಾಗಿರುವುದರಿಂದ, ಸ್ವಲ್ಪ ತಡವಾಗಿಯೇ ಸಿನಿಮಾ ಸೆಟ್ಟೆರೋ ಸಾಧ್ಯತೆಯಿದೆ.