• May 6, 2022

“ಹೆಡ್ ಬುಷ್”ಗೆ ಬಂತು ಸಂಕಷ್ಟ!!

“ಹೆಡ್ ಬುಷ್”ಗೆ ಬಂತು ಸಂಕಷ್ಟ!!

‘ನಟರಾಕ್ಷಸ’ ಧನಂಜಯ ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿ ಆಗಿರುವವರು. ತಮ್ಮದೇ ನಿರ್ಮಾಣದ ‘ಬಡವ ರಾಸ್ಕಲ್’ ಚಿತ್ರದಿಂದ ಕನ್ನಡದಲ್ಲಿ ಒಬ್ಬ ಮಾಸ್ ಹೀರೋ ಆಗಿ ತನ್ನ ಜಾಗವನ್ನ ಶಾಶ್ವತ ಮಾಡಿಕೊಂಡಿರುವ ಇವರು, ಖಳನಾಯಕನ ಪಾತ್ರಕ್ಕೂ ಸೈ, ಪೋಷಕ ನಟನ ಪಾತ್ರಕ್ಕೂ ಸೈ. ಸದ್ಯ ಇವರ ಹಲವಾರು ಮುಂದಿನ ಚಿತ್ರಗಳಲ್ಲಿ ಒಂದಾದ ‘ಹೆಡ್ ಬುಷ್’ ಸುದ್ದಿಯಲ್ಲಿದೆ.

ಬೆಂಗಳೂರು ಅಂಡರ್ ವರ್ಲ್ಡ್ ನ ದೊರೆ ಎಂ ಪಿ ಜಯರಾಜ್ ಅವರ ಆತ್ಮಕತೆ ಆಧಾರಿತ ಚಿತ್ರ. ಅಗ್ನಿ ಶ್ರೀಧರ್ ಅವರು ಬರೆದಿರುವ ಕಥೆಯನ್ನ ಆಧಾರಿಸಿ ಶೂನ್ಯ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಸಿನಿಮಾ ಇದು. ‘ಮೈ ಡೇಸ್ ಇನ್ ದಿ ಅಂಡರ್ ವರ್ಲ್ಡ್’ ಎಂಬ ಹೆಸರಿನ ಪುಸ್ತಕದಿಂದ ‘ಹೆಡ್ ಬುಷ್’ ಚಿತ್ರವನ್ನ ಮಾಡಲಾಗುತ್ತಿದೆ. ಈಗ ಈ ಸಿನಿಮಾಗೆ ಅಡ್ಡಿಯೊಂದು ಬಂದಿದೆ. “ನಮ್ಮ ತಂದೆಯವರ ಕಥೆಯನ್ನಿಟ್ಟುಕೊಂಡು ಯಾರು ಸಿನಿಮಾ ಮಾಡುವಂತಿಲ್ಲ” ಎಂದು ಫಿಲಂ ಚೇಂಬರ್ ಗೆ ದೂರು ಕೊಟ್ಟಿದ್ದಾರೆ ಎಂ ಪಿ ಜಯರಾಜ್ ಅವರ ಪುತ್ರ ಅಜಿತ್ ಜಯರಾಜ್. “ಇದು ಹೀಗೆಯೇ ಆದರೆ ಕಾನೂನು ಹೋರಾಟಕ್ಕೆ ಇಳಿಯುತ್ತೇನೆ.

ಕಾನೂನಿನ ಮೂಲಕವೇ ಈ ವಿಷಯವನ್ನ ಎದುರಿಸುತ್ತೇನೆ” ಎಂದು ಎಲ್ಲರಲ್ಲಿ ಭಯ ಹುಟ್ಟುವಂತೆ ಮಾಡಿದ್ದಾರೆ ಈ ‘ಡಾನ್’ ಪುತ್ರ. ಈ ಬಗ್ಗೆ ಮಾತನಾಡಿದ ಅವರು, ” ಈ ಚಿತ್ರ ಸಂಪೂರ್ಣವಾಗಿ ನಮ್ಮ ತಂದೆಯವರ ಜೀವನ ಆಧಾರಿತವಾಗಿದೆ. ಚಿತ್ರೀಕರಣದ ಆರಂಭಕ್ಕೂ ಮುನ್ನವೇ ಚಿತ್ರತಂಡವನ್ನು ನಾನು ಸಂಪರ್ಕಿಸಿದ್ದೆ. ಆದರೆ ಅದರಿಂದ ಏನೂ ಉಪಯೋಗ ಆದಂತಿಲ್ಲ. ಇದು ನಮ್ಮ ವೈಯಕ್ತಿಕ ಜೀವನಕ್ಕೆ ತೊಂದರೆ ಉಂಟುಮಾಡಲಿದೆ. ಅದಕ್ಕಾಗಿಯೇ ನಾನು ಕಾನೂನು ಮಾರ್ಗವನ್ನು ಹಿಡಿಯಲು ಹೊರಟಿದ್ದೇನೆ” ಎಂದಿದ್ದಾರೆ.

‘ಹೆಡ್ ಬುಷ್’ ಎರಡು ಭಾಗಗಳಲ್ಲಿ ಬಿಡುಗಡೆಯಗಲಿರುವ ಚಿತ್ರ. ‘ಸೋಮಣ್ಣ ಟಾಕೀಸ್’ ನ ಜೊತೆಗೆ ನಾಯಕ ನಟ ಡಾಲಿ ಧನಂಜಯ ಅವರು ತಮ್ಮ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ನ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ದಾಲಿಗೆ ನಾಯಕಿಯಾಗಿ ಪಾಯಲ್ ರಾಜಪುತ್ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ತುಂಬಿದ್ದು, ಲೂಸ್ ಮಾದ ಯೋಗಿ, ರಘು ಮುಖರ್ಜಿ, ವಸಿಷ್ಟ ಸಿಂಹ, ಶ್ರುತಿ ಹರಿಹರನ್ ಮುಂತಾದವರು ಚಿತ್ರದಲ್ಲಿರಲಿದ್ದಾರೆ. ಎಲ್ಲ ಸುಸೂತ್ರವಾಗಿದ್ದರೆ, ಇದೇ ಸೆಪ್ಟೆಂಬರ್ ತಿಂಗಳಲ್ಲಿ ಕನ್ನಡದ ಜೊತೆಗೆ, ತೆಲುಗು, ತಮಿಳು, ಮಲಯಾಳಂ, ಇಂಗ್ಲೀಷ್ ಹಾಗು ಹಿಂದಿ ಸೇರಿ ಒಟ್ಟು ಆರು ಭಾಷೆಗಳಲ್ಲಿ ಚಿತ್ರವನ್ನ ತೆರೆಕಾಣಿಸುವ ಅಪೇಕ್ಷೆಯಲ್ಲಿತ್ತು ಚಿತ್ರತಂಡ. ಶೂಟಿಂಗ್ ಪ್ರಕ್ರಿಯೆಯನ್ನು ಎಂದೋ ಮುಗಿಸಿಕೊಂಡು ಸಿನಿಮಾದ ಬಿಡುಗಡೆಯ ಕಡೆಗೆ ಗಮನ ಹರಿಸತೊಡಗಿದ್ದ ಚಿತ್ರತಂಡಕ್ಕೆ ಈ ವಿಷಯದಿಂದ ದಿಗಿಲು ಉಂಟಾದಂತಾಗಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.