- July 10, 2022
ಹ್ಯಾಟ್ರಿಕ್ ಹೀರೋಗಿದೆ ಇನ್ನೊಂದು ಹೆಸರು


ಕನ್ನಡ ಚಿತ್ರರಂಗದಲ್ಲಿ ಶಿವರಾಜ್ ಕುಮಾರ್ ಅವರನ್ನು ತಿಳಿಯದವರಿಲ್ಲ. ಅವರು ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಪರಿಚಿತರಾಗಿರುವ ನಟ. ಕನ್ನಡ ಚಿತ್ರರಂಗದಲ್ಲಿ ಸೆಂಚುರಿ ಬಾರಿಸಿ ಕರುನಾಡ ಚಕ್ರವರ್ತಿ ಎನಿಸಿಕೊಂಡವರು ಅವರೇ. ಜೊತೆಯಾಗಿ ಮೂರು ಸಿನಿಮಾಗಳಲ್ಲಿ ಯಶಸ್ಸು ಪಡೆದು ಹ್ಯಾಟ್ರಿಕ್ ಹೀರೋ ಅನಿಸಿಕೊಂಡದ್ದೂ ಅವರೇ, ಅಣ್ಣಾವ್ರ ಮಗನಾಗಿ ಪ್ರೀತಿಯಿಂದ ಎಲ್ಲರ ಕೈಯಿಂದ ಶಿವಣ್ಣ ಎಂದು ಕರೆಸಿಕೊಂಡಿದ್ದೂ ಇವರೇ. ಆದರೆ ಅಸಲಿಗೆ ಇವರಿಗೆ ಇನ್ನೊಂದು ಹೆಸರಿದೆಯಂತೆ. ಅದೇ ಅವರ ನಿಜವಾದ ಹೆಸರು ಕೂಡ.


ಸಾಧಾರಣವಾಗಿ ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಗಳಿಗೆ ಅವರ ಹೆಸರು ‘ಪುಟ್ಟಸ್ವಾಮಿ’ ಎಂದು ತಿಳಿದಿದೆ. ಆದರೆ ಅವರು ಸಹಿ ಹಾಕುವಾಗ ಬಳಸುವ ಹೆಸರು ಅಥವಾ ಪಾಸ್ಪೋರ್ಟ್ ನಲ್ಲಿರುವ ಹೆಸರು ‘ನಾಗರಾಜು ಶಿವ ಪುಟ್ಟಸ್ವಾಮಿ’! ಎಲ್ಲರಿಗೂ ಕುತೂಹಲ ಮೂಡಿಸಿದ್ದ ಈ ಹೆಸರಿನ ಕುರಿತು ಸ್ವತಃ ಶಿವರಾಜಕುಮಾರ್ ಅವರೇ ಸಂಶಯ ಬಗೆಹರಿಸಿದ್ದಾರೆ. ಹೌದು, ಶಿವಣ್ಣ ಅವರ ಹುಟ್ಟಿನ ಹೆಸರು ‘ನಾಗರಾಜು ಶಿವ ಪುಟ್ಟಸ್ವಾಮಿ’.


ಮೈಸೂರಿನಲ್ಲಿ ಆಂದೋಲನ ಪತ್ರಿಕೆಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಒಂದರಲ್ಲಿ ತಮ್ಮ ನಿಜವಾದ ಹೆಸರಿನ ಬಗ್ಗೆ ಮಾತನಾಡಿದ್ದ ಶಿವಣ್ಣ ”ನನ್ನ ಒರಿಜಿನಲ್ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ. ನಾನು ಈಗಲೂ ಚೆಕ್ ಗೆ ಸಹಿ ಮಾಡೋದು ಇದೇ ಹೆಸರಲ್ಲಿ. ನನ್ನ ಪಾಸ್ಪೋರ್ಟ್ ಕೂಡ ಎನ್ ಎಸ್ ಪುಟ್ಟಸ್ವಾಮಿ ಎಂದಿದೆ. ಅಲ್ಲದೆ ನಾನು ಚೆನ್ನೈನಲ್ಲಿ ಓದಿ ಬೆಳೆದದ್ದು, ಈಗಲೂ ನನ್ನ ಗೆಳೆಯರು ನನ್ನನ್ನು ಪುಟ್ಟಸ್ವಾಮಿ, ಪುಟ್ಟು ಅಂತಲೇ ಕರೆಯುತ್ತಾರೆ” ಎಂದರು.




ಮುಂದುವರಿಸುತ್ತಾ ”ಇಲ್ಲಿಗೆ ಬಂದ ಮೇಲೆ ತಿಪಟೂರಿನಲ್ಲಿದ್ದ ನನ್ನ ತಂದೆಯ ಸ್ನೇಹಿತ ರಾಮಸ್ವಾಮಿಯವರ ಸಲಹೆಯ ಮೇರೆಗೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಎಂದು ಹೆಸರಿಡಲಾಯಿತು” ಎಂದರು. ಒಟ್ಟಿನಲ್ಲಿ ಹೆಸರೇನೇ ಇರಲಿ, ಕನ್ನಡಿಗರೆಲ್ಲಾ ನೆಚ್ಚಿ ಮೆಚ್ಚಿರುವ ಶಿವರಾಜ್ ಕುಮಾರನ್ನು ಇಷ್ಟ ಪಡದವರಿಲ್ಲ.




