- May 10, 2022
ಹೊಸ ಭಡ್ತಿ ಪಡೆದ ಕೊಡಗಿನ ಕುವರಿ


ಬಹುಭಾಷಾ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಮಂಜಿನ ನಗರಿಯ ಚೆಲುವೆ ಹರ್ಷಿಕಾ ಪೂಣಚ್ಚ ಇದೀಗ ರಿಪೋರ್ಟರ್ ಆಗಿ ಭಡ್ತಿ ಪಡೆದಿದ್ದಾರೆ. ಅರೇ, ಹರ್ಷಿಕಾ ನಟನೆಯಿಂದ ಬ್ರೇಕ್ ಪಡೆದುಕೊಂಡರಾ ಅಂಥ ಆಲೋಚಿಸುತ್ತಿದ್ದೀರಾ? ಹರ್ಷಿಕಾ ಪೂಣಚ್ಚ ರಿಪೋರ್ಟರ್ ಆಗಿ ಬದಲಾದುದೇನೋ ನಿಜ. ಆದರೆ ರಿಯಲ್ ನಲ್ಲಿ ಅಲ್ಲ, ರೀಲ್ ನಲ್ಲಿ!


ಗುರುಮೂರ್ತಿ ಸುನಾಮಿ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ “ಮಾರಕಾಸ್ತ್ರ”ಕ್ಕೆ ಕೊಡಗಿನ ಕುವರಿ ಸಹಿ ಹಾಕಿದ್ದಾರೆ. ಕೋಮಲ ನಟರಾಜ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು ಹೊಸ ಪ್ರತಿಭೆ ಆನಂದ್ ಆರ್ಯ ಅವರಿಗೆ ನಾಯಕಿಯಾಗಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಳ್ಳುತ್ತಿದ್ದಾರೆ.


ಅಂದ ಹಾಗೇ ಈ ಸಿನಿಮಾದಲ್ಲಿ ಹರ್ಷಿಕಾ ರಿಪೋರ್ಟರ್ ಆಗಿ ನಟಿಸುತ್ತಿದ್ದಾರೆ. ತಮ್ಮ ಪಾತ್ರದ ಕುರಿತು ಮಾತನಾಡಿರುವ ಹರ್ಷಿಕಾ “ನಾನು ಇಲ್ಲಿ ವರದಿಗಾರ್ತಿ ಆಗಿ ನಟಿಸುತ್ತಿದ್ದೇನೆ. ಅವಳು ಅವಳ ವೃತ್ತಿಯನ್ನು ಇಷ್ಟಪಡುತ್ತಾಳೆ. ಅಪರಾಧಗಳು ನಡೆದರೆ ಅವಳು ಮೊದಲು ಆ ಸ್ಥಳದಲ್ಲಿ ಇರುತ್ತಾಳೆ” ಎಂದು ಹೇಳುತ್ತಾರೆ.


“ಎಲ್ಲದಕ್ಕಿಂತಲೂ ಮುಖ್ಯವಾಗಿ ಇದೊಂದು ಯುವತಂಡ ಆಗಿದೆ. ಜೊತೆಗೆ ಸ್ಕ್ರಿಪ್ಟ್ ಕೂಡಾ ತಯಾರಿಯಲ್ಲಿದೆ. ಇದುವೇ ನನ್ನನ್ನು ಈ ಸಿನಿಮಾದಲ್ಲಿ ಭಾಗವಹಿಸುವಂತೆ ಮಾಡಿತು” ಎಂದಿದ್ದಾರೆ.


ಇದಲ್ಲದೇ ಹಗ್ಗ, ತಾಯತ, ಓ ಪ್ರೇಮ ಸಿನಿಮಾಗಳ ಜೊತೆಗೆ ಎರಡು ಭೋಜಪುರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. “ಕೋವಿಡ್ ನಿಂದಾಗಿ ನನ್ನ ಹಲವು ಸಿನಿಮಾ ರಿಲೀಸ್ ತಡ ಆಗಿವೆ. ಈ ವರ್ಷ ನನ್ನ ಹಲವು ಸಿನಿಮಾಗಳು ರಿಲೀಸ್ ಆಗಲಿದೆ ಎಂದು ನಂಬಿದ್ದೇನೆ” ಎಂದಿದ್ದಾರೆ.






