• April 9, 2022

ಮತ್ತೆ ಪ್ರಶಸ್ತಿ ಮುಡಿಗೇರಿಸಿಕೊಂಡ ರಿಕ್ಕಿ

ಮತ್ತೆ ಪ್ರಶಸ್ತಿ ಮುಡಿಗೇರಿಸಿಕೊಂಡ ರಿಕ್ಕಿ

ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರು ಎರಡನೇ ಬಾರಿ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಿಕ್ಕಿ ಕೇಜ್ ಹಾಗೂ ಸ್ಟೀವರ್ಟ್ ಕೋಪ್ ಲ್ಯಾಂಡ್ ಅವರ ಡಿವೈನ್ ಟೈಡ್ಸ್ ಆಲ್ಬಂಗೆ ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಯಲ್ಲಿ ರಿಕ್ಕಿ ಕೇಜ್ ಅವರಿಗೆ ಗ್ರ್ಯಾಮಿ ಅವಾರ್ಡ್ ಲಭಿಸಿದೆ. ಇದನ್ನು ಲಹರಿ ಸಂಸ್ಥೆ ನಿರ್ಮಿಸಿತ್ತು. ಎಂಜಿಎಂ ಗ್ರ್ಯಾಂಡ್ ಗಾರ್ಡನ್ ಅರೇನಾ ಲಾಸ್ ವೇಗಾಸ್ ನಲ್ಲಿ ಪ್ರತಿಷ್ಠಿತ 2022ರ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ ನಡೆದಿತ್ತು.

ಇನ್ನು ಈ ಖುಷಿಯನ್ನು ರಿಕ್ಕಿ ಕೇಜ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. “ಡಿವೈನ್ ಟೈಡ್ಸ್ ಹಾಡಿಗೆ ನಾನು ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿರುವುದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನ ಪಕ್ಕದಲ್ಲಿ ನಿಂತಿರುವ ಲಿವಿಂಗ್ ಜೀವಂತ ದಂತಕಥೆ ಸ್ಟೀವರ್ಟ್ ಕೋಪ್ ಲ್ಯಾಂಡ್ ಅವರನ್ನು ಪ್ರೀತಿಸುತ್ತೇನೆ. ನಿಮ್ಮನ್ನೆಲ್ಲರನ್ನೂ ಪ್ರೀತಿಸುತ್ತೇನೆ. ನನಗೆ ಎರಡನೇ ಗ್ರ್ಯಾಮಿ ಅವಾರ್ಡ್. ಅವರಿಗೆ ಇಂದು ಆರನೇ ಅವಾರ್ಡ್” ಎಂದು ಬರೆದುಕೊಂಡಿರುವ ರಿಕ್ಕಿ ಸ್ಟೀವರ್ಟ್ ಕೋಪ್ ಲ್ಯಾಂಡ್ ಅವರೊಂದಿಗೆ ನಿಂತುಕೊಂಡು ಇರುವ ಫೋಟೋ ಹಂಚಿಕೊಂಡಿದ್ದಾರೆ.

ಡಿವೈನ್ ಟೈಡ್ಸ್ ಆಲ್ಬಂನಲ್ಲಿ ವಿಶ್ವದ ಸಹಜತೆ ಹಾಗೂ ಸೊಗಡನ್ನು ತೋರಿಸಲಾಗಿದ್ದು ಈ ಆಲ್ಬಂನಲ್ಲಿ ಒಂಬತ್ತು ಹಾಡು ಹಾಗೂ 8 ವೀಡಿಯೋಗಳಿವೆ. ಹಿಮಾಲಯದಿಂದ ಸ್ಪೇನ್ ವರೆಗೂ ಈ ಆಲ್ಬಂಗಾಗಿ ಶೂಟಿಂಗ್ ಮಾಡಲಾಗಿದೆ. ಈ ಆಲ್ಬಂ ಈಗಾಗಲೇ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.