• March 31, 2022

‘ಏಕ್ ಲವ್ ಯಾ’ ಇನ್ನು ನಿಮಗೆ ಲಭ್ಯ..

‘ಏಕ್ ಲವ್ ಯಾ’ ಇನ್ನು ನಿಮಗೆ ಲಭ್ಯ..

ದಶಕಗಳಿಂದ ಕನ್ನಡಿಗರ ಮನದಲ್ಲಿ ಮನೆಮಾಡಿರೋ ಹೆಸರಾಂತ ನಿರ್ದೇಶಕ ‘ಜೋಗಿ’ ಪ್ರೇಮ್ ಅವರ ಇತೀಚಿಗಿನ ಚಿತ್ರ ‘ಏಕ್ ಲವ್ ಯಾ’. ‘ದಿ ವಿಲನ್’ ನಂತರ ಒಂದಷ್ಟು ಸಮಯ ಕಳೆದು ಪ್ರೇಮ್ ಈ ಸಿನಿಮಾ ಮಾಡಿದ್ದರಿಂದ ನಿರೀಕ್ಷೆಗಳು ಹೆಚ್ಚೇ ಇತ್ತು. ಅಂತೆಯೇ ಚಿತ್ರಮಂದಿರಗಳತ್ತ ಜನರನ್ನ ಸೆಳೆಯುವಲ್ಲೂ ಸಿನಿಮಾ ಯಶಸ್ವಿಯಾಗಿತ್ತು. ಈಗ ಚಿತ್ರ ಪ್ರೇಕ್ಷಕರ ಮನೆ-ಮನೆಗಳಲ್ಲಿ ಲಭ್ಯವಾಗಲಿದೆ. ಅದ್ಹೇಗೆ ಅಂದರೆ, ಸಾಮಾನ್ಯ ಉತ್ತರ.. ಒಟಿಟಿ.

ಇತ್ತೀಚೆಗೆ ಅತಿ ಹೆಚ್ಚು ಕನ್ನಡ ಸಿನಿಮಾಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡ ಸಂಸ್ಥೆ ‘zee5’. ‘ಏಕ್ ಲವ್ ಯಾ’ ಸಿನಿಮಾ ಕೂಡ ಇವರ ಮಡಿಲಿಗೆ ಸೇರಿದೆ.ತನ್ನ ಹಾಡುಗಳಿಂದ ‘ಮ್ಯೂಸಿಕಲ್ ಬ್ಲಾಕ್ ಬಸ್ಟರ್’ ಎಂಬ ಖ್ಯಾತಿ ಪಡೆದ ಈ ಚಿತ್ರ ಬಿಡುಗಡೆಗೂ ಮುನ್ನವೇ ‘zee5’ ಜೊತೆಗೆ ಒಪ್ಪಂದದಲ್ಲಿತ್ತು ಎನ್ನಲಾಗಿದೆ. ‘ಜೀ ಕನ್ನಡ’ ವಾಹಿನಿಯಲ್ಲೂ ಚಿತ್ರ ಪ್ರಸಾರಗೊಳ್ಳಲಿದ್ದು, ದಿನಾಂಕ ಇನ್ನು ಖಾತ್ರಿಯಾಗಿಲ್ಲ. ಇದೇ ಏಪ್ರಿಲ್ 8ರಿಂದ ‘ಏಕ್ ಲವ್ ಯಾ’ ಚಿತ್ರ zee5 ನಲ್ಲಿ ಲಭ್ಯವಾಗಲಿದೆ. ಪ್ರೇಮ್ಸ್ ಅವರ ಈ ಪ್ರೇಮಕತೆಯನ್ನ ಚಿತ್ರಮಂದಿರಗಳಲ್ಲಿ ನೋಡಲಾಗದ ಪ್ರೇಕ್ಷಕರು ‘zee5’ನಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು.

ರಕ್ಷಿತಾ ಪ್ರೇಮ್ ಅವರ ‘ರಕ್ಷಿತಾಸ್ ಫಿಲಂ ಫ್ಯಾಕ್ಟರಿ’ ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡ ಈ ಸಿನಿಮಾದಲ್ಲಿ ರಕ್ಷಿತ ಅವರ ಸಹೋದರ ರಾಣ ನಾಯಕನಟರಾಗಿ ಬಣ್ಣ ಹಚ್ಚಿದ್ದಾರೆ. ಇವರಿಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತ ರಾಮ್ ಹಾಗು ರೀಷ್ಮ ನಾನಯ್ಯಾ ನಟಿಸಿದ್ದು, ಕಾಮಿಡಿ ಕಿಲಾಡಿಯ ಸೂರಜ್, ಪೋಷಕ ನಟರಾದ ಸುಚೇಂದ್ರ ಪ್ರಸಾದ್, ಶಶಿಕುಮಾರ್, ಚರಣ್ ರಾಜ್ ಮುಂತಾದವರು ಪ್ರಮುಖ ಪಾತ್ರಗಳಾಗಿ ಅಭಿನಯಿಸಿದ್ದಾರೆ. ಫೆಬ್ರವರಿ 24ರಂದು ಚಿತ್ರ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮನಸೆಳೆವ ಪ್ರೇಮಕತೆಯಾಗಿ ಹೊರಹೊಮ್ಮಿತ್ತು.