• April 9, 2022

‘777 ಚಾರ್ಲಿ’ ಚಿತ್ರತಂಡದಿಂದ ಕೊನೆಗೂ ಒಂದು ಶುಭಸುದ್ದಿ.

‘777 ಚಾರ್ಲಿ’ ಚಿತ್ರತಂಡದಿಂದ ಕೊನೆಗೂ ಒಂದು ಶುಭಸುದ್ದಿ.

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳನ್ನ ಹುಟ್ಟುಹಾಕೋ ಕಲಾವಿದರುಗಳಲ್ಲಿ ಮೊದಲಿಗರು ರಕ್ಷಿತ್ ಶೆಟ್ಟಿ. ಮಾಡಿರುವುದು ಬೆರಳೆಣಿಕಿಯಷ್ಟು ಸಿನಿಮಾಗಳಷ್ಟೇ ಆಗಿದ್ದರು ಸಹ ಕನ್ನಡಿಗರ ಮನದಲ್ಲಿ ಇವರಿಗೆ ವಿಶೇಷ ಸ್ಥಾನ ಭದ್ರವಾಗಿದೆ. ಇವರ ನಟನೆಯಲ್ಲಿ ಬಿಡುಗಡೆಯಾದ ಕೊನೆಯ ಚಿತ್ರ ‘ಅವನೇ ಶ್ರೀಮನ್ನಾರಾಯಣ’. ಅದು ಕೂಡ ಸುಮಾರು ಮೂರು ವರ್ಷಗಳ ಹಿಂದೆ, ಅಂದರೆ 2019ರಲ್ಲಿ. ಇವರ ಬಹುನಿರೀಕ್ಷಿತ ಚಿತ್ರ ‘777 ಚಾರ್ಲಿ’ ಬಿಡುಗಡೆಗೆ ಸಿದ್ದವಾಗಿ ತಿಂಗಳುಗಳೇ ಕಳೆದಿವೆ. ಆದರೆ ಬಿಡುಗಡೆಗೆ ಮುಹೂರ್ತ ಮಾತ್ರ ಕೂಡಿಬಂದಿರಲಿಲ್ಲ.

‘777 ಚಾರ್ಲಿ’ ಒಂದು ಪಾನ್-ಇಂಡಿಯನ್ ಚಿತ್ರ. ಯಾರೊಂದಿಗೂ ಹೆಚ್ಚು ಬೆರೆಯದೆ ತಾನು-ತನ್ನ ಕೆಲಸ ಅಂತ ಇರೋ ಒಬ್ಬ ಸಾಮಾನ್ಯ ಯುವಕ ‘ಧರ್ಮ’ನ ಬಾಳಲ್ಲಿ ಚಾರ್ಲಿ ಎಂಬ ನಾಯಿ ಬಂದು ಏನೆಲ್ಲಾ ಬದಲಾವಣೆ ತರಬಹುದು ಎಂಬುದು ಚಿತ್ರದ ಮೂಲಕತೆ. ಆಕ್ಷನ್ ಅಥವಾ ಪ್ರೇಮಕಥೆಯ ಸಿನಿಮಾಗಳಷ್ಟೇ ಅಲ್ಲ ಈ ರೀತಿಯ ಕಥೆಯಲ್ಲು ಸಿನಿಮಾ ಮಾಡಬಹುದು ಎಂದು ಚಿತ್ರದ ಮೂಲಕ ಹೇಳಹೊರಟಿದ್ದಾರೆ ರಕ್ಷಿತ್. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿರೊ ಸಿನಿಮಾಗೆ ಆಯಾ ಭಾಷೆಗಳಲ್ಲಿನ ಹೆಸರಾಂತ ವಿತರಕರು ದೊರಕಿದ್ದಾರೆ. ‘ಡಿಸೆಂಬರ್ 31ರಂದು ನಾವು ಬರಲಿದ್ದೇವೆ’ ಎಂದು ಘೋಷಿಸಿಕೊಂಡಿದ್ದ ಚಿತ್ರತಂಡ ನಂತರ ಕೊರೋನ ಕಾರಣಗಳಿಂದ ತಮ್ಮ ನಿರ್ಧಾರವನ್ನ ಬದಲಾಯಿಸಿಕೊಳ್ಳಬೇಕಾಯ್ತು. ಸದ್ಯ ತಮ್ಮ ಮುಂದಿನ ಬಿಡುಗಡೆ ದಿನಾಂಕವನ್ನ ತಿಳಿಸಲು ಚಿತ್ರತಂಡ ಮುಂದಾಗಿದೆ. ಇದೆ ಏಪ್ರಿಲ್ 10ರಂದು ‘777 ಚಾರ್ಲಿ’ಯ ಗೂಡೊಳಗಿನ ವಾಸಕ್ಕೆ ತೆರೆಬೀಳೋ ದಿನಾಂಕ ಗೊತ್ತಾಗಲಿದೆ. ಏಪ್ರಿಲ್ 10ರಂದು ಬೆಳಿಗ್ಗೆ 11:04ಕ್ಕೆ ಚಿತ್ರತಂಡ ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನ ಜನರೆದುರಿಗಿಡಲಿದೆ.

ಕಿರಣ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ‘777 ಚಾರ್ಲಿ’ಗೆ ರಕ್ಷಿತ್ ಶೆಟ್ಟಿಯವರ ಸ್ವಂತ ಸಂಸ್ಥೆ ‘ಪರಮ್ವಾಹ್ ಸ್ಟುಡಿಯೋಸ್’ ಬಂಡವಾಳ ಹೂಡಿದೆ. ನಾಯಕ ರಕ್ಷಿತ್ ಶೆಟ್ಟಿಯವರಿಗೆ ನಾಯಕಿಯಾಗಿ ಸಂಗೀತ ಶೃಂಗೇರಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ನೋಬಿನ್ ಪೌಲ್ ಸಂಗೀತವಿದ್ದು, ದಾನಿಶ್ ಶೇಟ್ ಹಾಗು ರಾಜ್ ಬಿ ಶೆಟ್ಟಿಯವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.