- April 5, 2022
‘ಸಖತ್’ ಬಂತು ಮುಂದೇನು ??


ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಚಂದನವನದಲ್ಲಿ ಅತಿ ಬ್ಯುಸಿ ಆಗಿರೋ ನಟರಲ್ಲಿ ಒಬ್ಬರು. ಗಣೇಶ್ ಅವರ ಬಳಿ ಸಾಲು ಸಾಲು ಸಿನಿಮಾಗಳು ಸಾಲು ನಿಂತಿವೆ. ಇವರ ಇತ್ತೀಚಿಗಿನ ‘ಸಖತ್’ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. 2021ರ ನವೆಂಬರ್ ನಲ್ಲಿ ಬೆಳ್ಳಿತೆರೆ ಕಂಡ ಈ ಸಿನಿಮಾ ಸಿನಿರಸಿಕರಿಂದ ಒಳ್ಳೆಯ ಒಪ್ಪಿಗೆಯನ್ನ ಪಡೆದಿತ್ತು. ಬಿಡುಗಡೆಯಾಗಿ ಸುಮಾರು ನಾಲ್ಕು ತಿಂಗಳು ಕಳೆದ ಮೇಲೆ ಏಪ್ರಿಲ್ 4ರಂದು ಚಿತ್ರ ಒಟಿಟಿ ಮುಖ ಕಂಡಿದೆ.


ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಚಿತ್ರ ಏಪ್ರಿಲ್ 4ರಂದು ಉದಯ ಟಿವಿಯಲ್ಲಿ ಪ್ರಸಾರವಾಗುವ ಮೂಲಕ ಮೊದಲ ಬಾರಿ ಚಿತ್ರಮಂದಿರಗಳನ್ನು ಬಿಟ್ಟು ಹೊರಪ್ರಪಂಚಕ್ಕೆ ಕಾಲಿಟ್ಟಿತ್ತು. ಅದೇ ದಿನದಿಂದ ಸಿನಿಮಾ ‘ಸನ್ ನೆಕ್ಸ್ಟ್(sun nxt)’ ಹಾಗು ‘ನೆಟಫ್ಲಿಕ್ಸ್ (netflix)’ ಗಳಲ್ಲಿ ಲಭ್ಯವಾಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ನೋಡಲಾಗದ ಅಭಿಮಾನಿಗಳು ಈಗ ನೋಡಬಹುದಾಗಿದೆ. ಇದಷ್ಟೇ ಅಲ್ಲದೇ ಗಣೇಶ್ ಕನ್ನಡ ಕಿರುತೆರೆಯಲ್ಲೂ ಮೋಡಿ ಮಾಡುತ್ತಿದ್ದಾರೆ.


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗೋಲ್ಡನ್ ಗ್ಯಾಂಗ್’ ಎಂಬ ರಿಯಾಲಿಟಿ ಶೋ ಒಂದನ್ನ ನಡೆಸಿಕೊಡುತ್ತಿರೋ ಗೋಲ್ಡನ್ ಸ್ಟಾರ್ ಆ ಮೂಲಕವು ಅಭಿಮಾನಿಗಳ ಮನಗೆಲ್ಲುವುದರಲ್ಲಿ ಸೋತಿಲ್ಲ. ತಮ್ಮ ನಿರೂಪಣೆಯಿಂದ ಹಲವು ಪ್ರೇಕ್ಷಕರನ್ನು ಕಾರ್ಯಕ್ರಮದತ್ತ ಸೆಳೆದಿದ್ದಾರೆ ಗಣೇಶ್.


ಈಗಾಗಲೇ ಹೇಳಿದಂತೆ ಗಣೇಶ್ ಅವರ ಬಳಿ ಹಲವಾರು ಸಿನಿಮಾಗಳಿವೆ. ಯೋಗರಾಜ್ ಭಟ್ ಅವರ ನಿರ್ದೇಶನದ ಬಹುನಿರೀಕ್ಷಿತ ‘ಗಾಳಿಪಟ-2’ ಹಾಗು ಶ್ರೀಮಹೇಶ್ ಗೌಡ ಅವರ ನಿರ್ದೇಶನದ ‘ತ್ರಿಬಲ್ ರೈಡಿಂಗ್’ ಚಿತ್ರಗಳು ಬಿಡುಗಡೆಗೆ ಸಿದ್ದವಾಗಿವೆ. ‘ಚಮಕ್’ ಹಾಗು ‘ಸಕತ್’ ಮೂಲಕ ಎರಡು ಹಿಟ್ ಸಿನಿಮಾಗಳನ್ನು ನೀಡಿರೋ ಸುನಿ-ಗಣಿ ಜೋಡಿ ‘ದಿ ಸ್ಟೋರಿ ಆಫ್ ರಾಯಗಢ’ ಸಿನಿಮಾದ ಮೂಲಕ ಮತ್ತೆ ಒಂದಾಗಲಿದ್ದಾರೆ. ಇದಲ್ಲದೆ ತಮ್ಮ ಗೆಳೆಯನಾದ ಪ್ರೀತಮ್ ಗುಬ್ಬಿ ಅವರೊಂದಿಗೆ ಮತ್ತೊಮ್ಮೆ ಗಣೇಶ್ ಸಿನಿಮಾವೊಂದಕ್ಕೆ ಒಂದಾಗಲಿದ್ದು, ಸಿನಿಮಾದ ಶೀರ್ಷಿಕೆ ಇತ್ತೀಚಿಗಷ್ಟೇ ಬಿಡುಗಡೆಯಾಗಿದೆ. ‘ಮಳೆಯಲಿ ಜೊತೆಯಲಿ’, ‘ದಿಲ್ ರಂಗೀಲಾ’, ಹಾಗು ’99’ ನಂತಹ ಹಿಟ್ ಚಿತ್ರಗಳನ್ನು ಕೊಟ್ಟಿರೋ ಗಣೇಶ್ ಹಾಗು ಪ್ರೀತು ಜೋಡಿಯ ಮುಂದಿನ ಚಿತ್ರಕ್ಕೆ ‘ಬಾನ ದಾರಿಯಲ್ಲಿ’ ಎಂದು ಹೆಸರಿಡಲಾಗಿದೆ.






