- July 6, 2022
ಮತ್ತೆ ಕಿರುತೆರೆಗೆ ಗೋಲ್ಡನ್ ಸ್ಟಾರ್!


ಗೋಲ್ಡನ್ ಸ್ಟಾರ್ ಗಣೇಶ್ ಕಿರುತೆರೆಗೆ ಹೊಸಬರೇನಲ್ಲ. ಅವರು ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಹೋದವರು. ಆದರೂ ಕಿರುತೆರೆಯ ನಂಟನ್ನು ಎಂದು ಕಡಿದುಕೊಂಡವರಲ್ಲ. ಈ ಮೊದಲು ‘ಸೂಪರ್ ಮಿನಿಟ್’ ಮತ್ತು ‘ಗೋಲ್ಡನ್ ಗ್ಯಾಂಗ್’ ರಿಯಾಲಿಟಿ ಶೋಗಳ ಮೂಲಕ ಮಿಂಚಿದವರು ಇದೀಗ ಮತ್ತೊಂದು ಹೊಸ ರಿಯಾಲಿಟಿ ಶೋದೊಂದಿಗೆ ಕಿರುತೆರೆಗೆ ಬರಲಿದ್ದಾರೆ.


‘ನಮಸ್ಕಾರ ನಮಸ್ಕಾರ ನಮಸ್ಕಾರ …’ ಎಂದು ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಗಣೇಶ್ ಅವರ ಜೀವನ ‘ಮುಂಗಾರು ಮಳೆ’ ಸಿನಿಮಾದಿಂದ ಹೊಸ ತಿರುವನ್ನು ಪಡೆದುಕೊಂಡಿತು. ಸಿನಿಮಾ ಜಗತ್ತಿನೊಂದಿಗೆ ಕಿರುತೆರೆ ರಿಯಾಲಿಟಿ ಶೋ ಗಳನ್ನು ಮೈಂಟೈನ್ ಮಾಡಿಕೊಂಡು ಬಂದಿರುವ ಗಣೇಶ್ ಇದೀಗ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಸಂತೋಷವನ್ನುಂಟು ಮಾಡಿದೆ.
2003ರ ಅವಧಿಯಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ ಕಾಮಿಡಿ ಟೈಮ್’ ನಿಂದ ಗಣೇಶ್ ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. 2006ರಲ್ಲಿ ತೆರೆಕಂಡ ‘ಚೆಲ್ಲಾಟ’ ಸಿನಿಮಾದ ಮೂಲಕ ಅವರು ಬೆಳ್ಳಿತೆರೆ ಪ್ರವೇಶಿಸಿದರು. ಅದೇ ವರ್ಷ ತೆರೆಕಂಡ ‘ಮುಂಗಾರು ಮಳೆ’ ಬಹುದೊಡ್ಡ ಯಶಸ್ಸನ್ನು ಕಂಡಿತು. ನಂತರ ಹಲವಾರು ಯಶಸ್ವೀ ಚಿತ್ರಗಳಲ್ಲಿ ನಟಿಸಿರುವ ಗಣೇಶ್ ಅದರೊಂದಿಗೆ ‘ಸೂಪರ್ ಮಿನಿಟ್’ ಹಾಗೂ ‘ಗೋಲ್ಡನ್ ಗ್ಯಾಂಗ್’ ನಡೆಸಿಕೊಡುವುದರಲ್ಲೂ ಯಶಸ್ವಿಯಾದರು.


ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲು ಸಿದ್ಧವಾಗಿರುವ ‘ಇಸ್ಮಾರ್ಟ್ ಜೋಡಿ’ ರಿಯಾಲಿಟಿ ಶೋಗೆ ಗಣೇಶ್ ನಿರೂಪಕರಾಗಲಿದ್ದಾರೆ. ಈ ಬಗ್ಗೆ ಪ್ರೊಮೋ ಹಂಚಿಕೊಂಡಿರುವ ಸುವರ್ಣ ವಾಹಿನಿ ” ಮೊದಲು ನಿಮ್ಮ ಗಣಪಂಗೆ ಪ್ರೀತಿ ಸಿಕ್ಕಿದ್ದು ಟಿವಿಲಿ ನಮಸ್ಕಾರ ಅಂದಾಗ.. ಆಮೇಲೆ ಪ್ರೀತಿ ಮಾಡಿದಾಗ, ಪ್ರೀತಿ ಕೈ ಕೊಟ್ಟಾಗ, ಪ್ರೀತಿ ಸಿಕ್ಕಾಗ ಸಿಳ್ಳೆ- ಚಪ್ಪಾಳೆ ಹೊಡೆದು ಮೆರೆಸಿ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದ್ದೀರಾ. ಅಂತಹ ಪ್ರೀತಿನ ಮತ್ತೆ ಸೆಲೆಬ್ರೇಟ್ ಮಾಡೋಕೆ ; ರೋಮ್ಯಾಂಟಿಕ್ ಜೋಡಿಗಳ ಜೊತೆ ಮನರಂಜನೆಯ ಮೋಡಿ ಮಾಡೋಕೆ ನಿಮ್ಮ ಮುಂದೆ ತರ್ತಿದೀನಿ ISMART ಜೋಡಿ ಎಂದು ಬರೆದುಕೊಂಡಿದೆ.


ಒಟ್ಟಿನಲ್ಲಿ ಹೊಸ ರಿಯಾಲಿಟಿ ಶೋವನ್ನು ನೋಡುವ ಕಾತರ ಎಲ್ಲ ಪ್ರೇಕ್ಷಕರಲ್ಲೂ ಮೂಡಿದೆ.




