• March 12, 2022

ರಣಧೀರ ಪಾತ್ರ ಸಿಕ್ಕಿರುವುದು ನನ್ನ ಪುಣ್ಯ – ರಾಮ್ ಪವನ್ ಶೇಟ್

ರಣಧೀರ ಪಾತ್ರ ಸಿಕ್ಕಿರುವುದು ನನ್ನ ಪುಣ್ಯ – ರಾಮ್ ಪವನ್ ಶೇಟ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಭಾಷೆಯ ಸೊಬಗಿನ ಗಿಣಿರಾಮ ಧಾರಾವಾಹಿಯು ಯಶಸ್ವಿ 400 ಸಂಚಿಕೆಗಳನ್ನು ಪೂರೈಸಿದೆ. ಗಿಣಿರಾಮ ಧಾರಾವಾಹಿಯಲ್ಲಿ ಖಳನಾಯಕ, ಆಯಿ ಸಾಹೇಬ್ ನ ಮಗ ರಣಧೀರ ಆಗಿ ನಟಿಸುತ್ತಿರುವ ರಾಮ್ ಪವನ್ ಶೇಟ್ ಈ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

“ಗಿಣಿರಾಮ ಧಾರಾವಾಹಿಯು 400 ಸಂಚಿಕೆ ಪೂರೈಸಿದೆ. ಇದಕ್ಕೆ ಕನ್ನಡ ಜನತೆಯೇ ಮುಖ್ಯ ಕಾರಣ. ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಅದು ಕಡಿಮೆಯೇ. ಯಾಕೆಂದರೆ ಎಲ್ಲರೂ ಅಷ್ಟು ಪ್ರೀತಿಯಿಂದ ಗಿಣಿರಾಮ ಧಾರಾವಾಹಿ ನೋಡ್ತಾ ಇದ್ದಾರೆ. ಎಲ್ಲರ ಮನೆಮನೆಯಲ್ಲಿ ಗಿಣಿರಾಮ ಇದೆ. ಹೇಗೆ ಗಿಣಿಯನ್ನು ಸಾಕುತ್ತಾರೋ, ಹಾಗೇ ಪ್ರತಿಮನೆಯಲ್ಲಿ ಗಿಣಿರಾಮ ನ ನೋಡ್ತಾರೆ” ಎಂದು ಹೇಳುತ್ತಾರೆ ರಾಮ್ ಪವನ್ ಶೇಟ್.

ಇದರ ಜೊತೆಗೆ “ನಿರ್ದೇಶಕ ಪ್ರೀತಂ ಶೆಟ್ಟಿ, ನಿರ್ಮಾಪಕ ಭಾಸ್ಕರ್, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸಂಗಮೇಶ್, ಕ್ಯಾಮೆರಾಮೆನ್ ಪವನ್ ಜೊತೆಗೆ ಗಿಣಿರಾಮ ಧಾರಾವಾಹಿಯ ಎಲ್ಲಾ ಕಲಾವಿದರುಗಳು ಈ ಸಂಭ್ರಮದ ಹಿಂದೆ ಇದ್ದಾರೆ. ಅವರೆಲ್ಲರ ಶ್ರಮದಿಂದ ನಾವು ಮುನ್ನಡೆಯಲು ಸಾಧ್ಯ” ಎನ್ನುತ್ತಾರೆ ರಣಧೀರ ಪಾತ್ರಧಾರಿ.

ಪಾತ್ರದ ಬಗ್ಗೆ ಮಾತನಾಡಿರುವ ರಾಮ್ ಪವನ್ ಶೇಟ್ ” ಇಲ್ಲಿಯ ತನಕ ನಾನು ಮಾಡಿರುವ ಪಾತ್ರಗಳಲ್ಲಿ ರಣಧೀರ ಪಾತ್ರ ಕೊಂಚ ಸ್ಪೆಷಲ್. ಯಾಕೆಂದರೆ ಈ ಪಾತ್ರದಲ್ಲಿ ಧೈರ್ಯ ಜಾಸ್ತಿ. ರಣಧೀರ ಪಾತ್ರ ಅಂದಾಗಲೇ ನನಗೆ ಒಂದು ಹೆಮ್ಮೆ ಬರುತ್ತೆ. ನಟಿಸಲೂ ಅಷ್ಟೇ. ಒಟ್ಟಿನಲ್ಲಿ ಈ ಪಾತ್ರ ಸಿಕ್ಕಿರುವುದು ನನ್ನ ಪುಣ್ಯ ಅಂಥನೂ ಹೇಳ್ಬಹುದು. ಜೊತೆಗೆ ಈ ಪಾತ್ರ ನನಗಂತೂ ತುಂಬಾ ಜನಪ್ರಿಯತೆ ತಂದುಕೊಟ್ಟಿದೆ. ಖುಷಿಯಾಗ್ತಿದೆ ರಣಧೀರ ಪಾತ್ರ ಮಾಡೋದಕ್ಕೆ”ಎನ್ನುತ್ತಾರೆ.

ಪ್ರೀತಿಯಿಂದ ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ರಾಮ್ ಪವನ್ ಶೇಟ್ ನಂತರ ಮನೆದೇವ್ರು ಧಾರಾವಾಹಿಯಲ್ಲಿ ಖಳನಾಯಕನಾಗಿ ಮೋಡಿ ಮಾಡಿದರು. ತದ ನಂತರ ಬ್ರಹ್ಮಗಂಟು ಧಾರಾವಾಹಿಯಲ್ಲಿಯೂ ಖಳನಾಯಕನಾಗಿ ಅಬ್ಬರಿಸಿದ ರಾಮ್ ಪವನ್ ಸದ್ಯ ಕಿರುತೆರೆಯಲ್ಲಿ ರಣಧೀರನಾಗಿ ಮಿಂಚುತ್ತಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ರಾಮ್ ಪವನ್ ಶೇಟ್ ನಟಿಸಿದ್ದರೂ, ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ.