• January 1, 2022

ಗೋಲ್ಡನ್ ಗ್ಯಾಂಗ್ ಗಳ ಜೊತೆ ಜೀ ಕನ್ನಡಕ್ಕೆ ಬಂದ್ರು ಗೋಲ್ಡನ್ ಸ್ಟಾರ್

ಗೋಲ್ಡನ್ ಗ್ಯಾಂಗ್ ಗಳ ಜೊತೆ ಜೀ ಕನ್ನಡಕ್ಕೆ ಬಂದ್ರು ಗೋಲ್ಡನ್ ಸ್ಟಾರ್

“ಗೋಲ್ಡನ್ ಗ್ಯಾಂಗ್ ” ಜೀ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ . ಸ್ನೇಹಿತರಿಂದ ,ಸ್ನೇಹಿತರಿಗಾಗಿ , ಸ್ನೇಹಿತರಿಗೋಸ್ಕರವೇ ಸಿದ್ಧಗೊಂಡಿರುವ ಈ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾರಥಿಯಾಗಿದ್ದಾರೆ.
ಇದೀಗ 2022 ರ ಹೊಸ ವರ್ಷಾರಂಭದಲ್ಲಿ ” ಗೋಲ್ಡನ್ ಗ್ಯಾಂಗ್ ಪ್ರೀ ಲಾಂಚ್ ” ಈವೆಂಟ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿದ್ದು ಜನವರಿ 2 , ಭಾನುವಾರ ರಾತ್ರಿ 7. 30 ಕ್ಕೆ ಪ್ರಸಾರವಾಗಲಿದೆ . ಸದ್ಯ ಬಿಡುಗಡೆಯಾಗಿರುವ ಪ್ರೋಮೋ ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಈಗಾಗಲೇ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವೀಕ್ಷಕರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಜೀ ಕನ್ನಡ ಮನರಂಜನೆಯ ಮಹಾನಿಲ್ದಾಣವಾಗಿ ರೂಪುಗೊಂಡಿದೆ . ಬಹು ದಿನಗಳ ನಂತರ ನಿರೂಪಕನಾಗಿ ಕಿರುತೆರೆಗೆ ಮರಳಿರುವ ಕರುನಾಡಿನ ಮನೆಮಗ , ಮಳೆಹುಡುಗ ಗಣೇಶ್ ಈ ಶೋನ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಜೀ ಕುಟುಂಬದ ಕಲಾವಿದರ ಜೊತೆಗೆ ಹೆಜ್ಜೆ ಹಾಕಿ ಹಾಡಿ, ಆಡಿ , ನಲಿದು ಮನರಂಜಿಸಿರುವ ಗೋಲ್ಡನ್ ಸ್ಟಾರ್ ತನ್ನ ನಿರೂಪಣೆಯ ಹಳೆಯ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರೊಡನೆ ನಿರೂಪಣೆ ಮಾಡಿದ ಗಣೇಶ್ ಮೊದಲ ಸಿನಿಮಾ ಚೆಲ್ಲಾಟದ ಸಮಯದಿಂದಲೂ ಇರುವ ಅನುಶ್ರೀ ಅವರ ಪರಿಚಯವನ್ನು ನೆನಪಿಸಿಕೊಂಡರು.

ಆರಂಭದಲ್ಲಿ ವಿಶೇಷ ಅತಿಥಿಯಾಗಿ ನಿರ್ದೇಶಕ , ಸಿನಿಕವಿ ಯೋಗರಾಜ್ ಭಟ್ ಆಗಮಿಸಿದ್ದು ಮುಂಗಾರುಮಳೆಯ ಆದಿನಗಳನ್ನು ಜ್ಞಾಪಿಸಿಕೊಂಡು ಗಣೇಶ್ ಜೊತೆಗಿನ ತರಲೆ ದಿನಗಳನ್ನು ಮೆಲುಕುಹಾಕಿದ್ದಾರಂತೆ… ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿರುವ ಗೋಲ್ಡನ್ ಗ್ಯಾಂಗ್ ಶೀರ್ಷಿಕೆ ಗೀತೆಗೆ ವಿಜಯ್ ಪ್ರಕಾಶ್ ಅವರು ಧ್ವನಿಯಾಗಿದ್ದರೆ ಭಟ್ಟರು ಸಾಹಿತ್ಯ ರಚಿಸಿದ್ದಾರೆ . ಇದೀಗ ಈ ಫ್ರೆಂಡ್ಸ್ ಆಂಥೆಮ್ ಹಾಡು ಬಿಡುಗಡೆಯಾಗಿದ್ದು ಭಾರೀ ಮೆಚ್ಚುಗೆಗಳಿಸುತ್ತಿದೆ.

ಹಿರಿತೆರೆ , ಕಿರುತೆರೆ , ರಾಜಕೀಯ , ಕ್ರೀಡಾವಲಯ ಹೀಗೆ ವಿವಿಧ ಕ್ಷೇತ್ರಗಳ ಸಾಧಕರು ಅವರ ಸ್ನೇಹಿತರುಗಳು ಈ ಕಾರ್ಯಕ್ರಮದ ಭಾಗವಾಗಲಿದ್ದಾರೆ ಅಷ್ಟೇ ಅಲ್ಲದೆ ವೀಕ್ಷಕರಿಗೆ ತಮ್ಮ ಬಾಲ್ಯ , ಯೌವ್ವನದ ದಿನಗಳನ್ನು , ತಾವಾಡಿದ ಆಟ – ತುಂಟಾಟಗಳನ್ನು ನೆನಪಿಸಲಿದೆ ಎನ್ನುತ್ತಿದೆ ಜೀ ಕನ್ನಡ.
ನಮ್ಮೆಲ್ಲರ ” ಗೋಲ್ಡನ್ ಗ್ಯಾಂಗ್ ” ಗಳ ಜೊತೆಗೆ ಕಾರ್ಯಕ್ರಮ ನೋಡೋಣ ಸ್ನೇಹವನ್ನು ಸಂಭ್ರಮಿಸೋಣ..