- July 30, 2022
‘ವಿಕ್ರಾಂತ್ ರೋಣ’ನ ಜೊತೆ ಬರಲಿದ್ದಾನೆ ‘ಗಾಳಿಪಟ’ದ ಗಣೇಶ.


‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಸದ್ಯ ಬೆಳ್ಳಿತೆರೆಯ ಮೇಲೆ ರಾರಾಜಿಸುತ್ತಿದೆ. ಅದ್ಭುತ ಓಪನಿಂಗ್ ಕಂಡಂತಹ ಈ ಸಿನಿಮಾ ಎಲ್ಲಾ ಕಡೆಯಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಕನ್ನಡ ಮಾತ್ರವಲ್ಲದೆ, ಪಂಚ ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್ ನಲ್ಲೂ ಕೂಡ ಸಿನಿಮಾ ಬಿಡುಗಡೆಯಾಗಿದ್ದು, 3ಡಿಯಲ್ಲಿಯೂ ತೆರೆಕಂಡಿರುವುದು ಚಿತ್ರದ ಇನ್ನೊಂದು ವಿಶೇಷ. ಸದ್ಯ ಈ ಸಿನಿಮಾದ ಜೊತೆ ಕನ್ನಡದ ಇನ್ನೊಂದು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಗಾಳಿಪಟ 2’ ಕೈ ಜೋಡಿಸಿದೆ.


ಆಗಸ್ಟ್ 12ರಂದು ಬಿಡುಗಡೆಯಾಗುತ್ತಿರುವ ಯೋಗರಾಜ್ ಭಟ್ ಅವರ ನಿರ್ದೇಶನದ ಕನ್ನಡಿಗರ ಮನಸ್ಸುಗಳು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ‘ಗಾಳಿಪಟ 2’. ಗಣೇಶ ಹಾಗು ಭಟ್ಟರ ಜೋಡಿಯಲ್ಲಿ ಬರುತ್ತಿರುವ ನಾಲ್ಕನೇ ಸಿನಿಮಾ ಇದಾದ್ದರಿಂದ ಚಿತ್ರದ ಬಗೆಗೆ ಹೆಚ್ಚಿನ ನಿರೀಕ್ಷೆಗಳಿವೆ. ಇತ್ತೀಚಿಗಷ್ಟೇ ಚಿತ್ರದ ನಾಯಕನ ಪಾತ್ರವಾದ ‘ಗಣೇಶ’ನ ಕ್ಯಾರೆಕ್ಟರ್ ಟೀಸರ್ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಪಡೆದಿತ್ತು ಂ ಸದ್ಯ ಅದೇ ಟೀಸರ್ ಅನ್ನು ಎಲ್ಲೆಡೆ ಉತ್ತಮ ಪ್ರದರ್ಶನ ಪಡೆಯುತ್ತಿರೋ ‘ವಿಕ್ರಾಂತ್ ರೋಣ’ ಸಿನಿಮಾದ ಜೊತೆಗೆ ಜೋಡಿಸಲಾಗಿದೆ. ‘ವಿಕ್ರಾಂತ್ ರೋಣ’ ಸಿನಿಮಾದ 2ಡಿ ಆವೃತ್ತಿಯ ಜೊತೆಗೆ ಈ ಟೀಸರ್ ಪ್ರದರ್ಶನ ಕಾಣುತ್ತಿದೆ. ಇದೇ ಜುಲೈ 31ಕ್ಕೆ ‘ಗಾಳಿಪಟ 2’ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗುತ್ತಿದೆ.






