• March 23, 2022

‘ಕೆಜಿಎಫ್’ ಪ್ರಚಾರಕ್ಕೆ ಈ ಬಾರಿ ಅಭಿಮಾನಿಗಳೇ ಮುಂದಾಳುಗಳು!!!

‘ಕೆಜಿಎಫ್’ ಪ್ರಚಾರಕ್ಕೆ ಈ ಬಾರಿ ಅಭಿಮಾನಿಗಳೇ ಮುಂದಾಳುಗಳು!!!

ರಾಕಿ ಭಾಯ್ ಆಳ್ವಿಕೆಯನ್ನ ಪ್ರಪಂಚಕ್ಕೆ ತಿಳಿಸಲು ಇನ್ನೇನು ಸದ್ಯದಲ್ಲೇ ಕೆಜಿಎಫ್ ಚಿತ್ರ ತೆರೆಮೇಲೆ ಬರಲಿದೆ. ಏಪ್ರಿಲ್ 14ಕ್ಕೆ ಪ್ರಪಂಚದಾದ್ಯಂತ ‘ತೂಫಾನ್’ ಹುಟ್ಟುಹಾಕಲು ಚಿತ್ರತಂಡ ಕಾಯುತ್ತಿದ್ದರೆ, ಬೆಳ್ಳಿತೆರೆಯಲ್ಲಿ ಚಿತ್ರವನ್ನ ನೋಡಿ ಆನಂದಿಸಲು ಅಭಿಮಾನಿ ಸಾಗರವೇ ಕಾಯುತ್ತಿದೆ. ಈ ಸಂಧರ್ಭದಲ್ಲಿ ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳು ಬರದಿಂದ ಸಾಗುತ್ತಿವೆ. ‘ಹೊಂಬಾಳೆ’ ಸಂಸ್ಥೆ ಈ ಬಾರಿಯ ಪ್ರಚಾರದಲ್ಲಿ ಹೊಸ ದಾರಿಯೊಂದನ್ನ ತೆರೆದಿಟ್ಟಿದ್ದು, ಅಭಿಮಾನಿಗಳ ಆನಂದವನ್ನ ಹೆಚ್ಚಿಸಿದೆ.

ಈ ಬಾರಿಯ ವಿಶೇಷತೆಯೆಂದರೆ, ಪ್ರಚಾರಕ್ಕೆಂದು ಬಳಸೋ ಪೋಸ್ಟರ್ ಗಳ ಸೃಷ್ಟಿಕರ್ತರು ಸಿನಿಮಾದ ಅಭಿಮಾನಿಗಳೇ ಆಗಿರಲಿದ್ದಾರೆ. ಹೌದು, ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಪ್ರಮೋಷನ್ ಚಟುವಟಿಕೆಗಳಲ್ಲಿ ಪೋಸ್ಟರ್ ಗಳದ್ದು ಒಂದು ಅತಿಮುಖ್ಯ ಪಾಲು. ಬಿಡುಗಡೆಯ ದಿನಾಂಕ ಹತ್ತಿರಬರುತ್ತಿರುವ ಹೊತ್ತಿಗೆ ಚಿತ್ರತಂಡ ತಮ್ಮ ಈ ವಿಶೇಷ ನಿರ್ಧಾರವನ್ನ ಹೊರಹಾಕಿದೆ. ಕೆಜಿಎಫ್ ನ ಮೆರವಣಿಗೆ ಹೋಗುವಲ್ಲೆಲ್ಲ ಅಭಿಮಾನಿಗಳ ಕೈಯಲ್ಲಿ ಮೂಡಿಬಂದ ಕಲೆಯೇ ಗುರುತಾಗಲಿದೆ. ಅಭಿಮಾನಿಗಳು ತಮ್ಮ ಕೈಯಾರೆ ಬಿಡಿಸಿದಂತ ‘ಕೆಜಿಎಫ್’ ಸಿನಿಮಾಸಂಭಂದಿ ಚಿತ್ರಗಳು ಪ್ರಚಾರದ ಪೋಸ್ಟರ್ ಗಳಾಗಲಿವೆ.

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಹಂಚಿಕೊಂಡಿರೋ ‘ಹೊಂಬಾಳೆ’ ಸಂಸ್ಥೆಯು ‘ಈ ಚಿತ್ರ ಇಷ್ಟು ಬೆಳೆದಿರುವುದು ನಿಮ್ಮಿಂದಲೇ, ಅಭಿಮಾನಿಗಳಿಲ್ಲದೆ ‘ಕೆಜಿಎಫ್’ ಇಲ್ಲ. ಹಾಗಾಗಿ ಈ ಬಾರಿಯು ನಿಮ್ಮ ಸಹಕಾರ ಕೋರುತ್ತೇವೆ.’ ಎಂದು ಬರೆದುಕೊಂಡಿದ್ದಾರೆ. ತಾವು ಬರೆದ ಚಿತ್ರಗಳನ್ನು ಒಪ್ಪಿಸಲು ಮಾರ್ಚ್ 30ರಂದು ಕೊನೆಯ ದಿನಾಂಕವೆಂದು ಕೂಡ ಉಲ್ಲೇಖಿಸಿದೆ.