• July 8, 2022

ಪರಭಾಷೆಗೆ ‘ದ್ವಿತ್ವ’ !!

ಪರಭಾಷೆಗೆ ‘ದ್ವಿತ್ವ’ !!

‘ಲೂಸಿಯ’, ‘ಯು-ಟರ್ನ್’ ರೀತಿಯ ಬುದ್ದಿವಂತ ಸಿನಿಮಾಗಳಿಂದ ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನಾವನ್ನು ಪಡೆದಿರೋ ಯುವ ನಿರ್ದೇಶಕರು ಪವನ್ ಕುಮಾರ್ ಅವರು. ಹಲವು ಚಿತ್ರಗಳಲ್ಲಿ ನಟಿಸಿ, ಹಲವು ಚಿತ್ರಗಳ ತೆರೆಹಿಂದೆ ಕೆಲಸ ಮಾಡಿ, ಸದ್ಯ ಮೂರು ಸೂಪರ್ ಹಿಟ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ನೀಡಿರುವ ಇವರ ನಾಲ್ಕನೇ ಸಿನಿಮಾ ಕನ್ನಡಿಗರನ್ನು ಹುಚ್ಚೆದ್ದು ಕುಣಿಸಿತ್ತು. ಕಾರಣ ಇವರ ನಿರ್ದೇಶನದಲ್ಲಿ ಮೂಡಿಬರುವ ನಾಲ್ಕನೇ ಸಿನಿಮಾ ಘೋಷಣೆಯಾಗಿದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೆ.’ಹೊಂಬಾಳೆ ಫಿಲಂಸ್’ ನಿರ್ಮಾಣದಲ್ಲಿ ಮೂಡಿಬರಲಿದ್ದ ಈ ಸಿನಿಮಾಗೆ ‘ದ್ವಿತ್ವ’ ಎಂದು ಹೆಸರು ಕೂಡ ಇಡಲಾಗಿತ್ತು. ತಮಿಳಿನ ಸ್ಟಾರ್ ನಟಿ ತ್ರಿಷಾ ಕೃಷ್ಣನ್ ಅವರನ್ನು ನಾಯಕಿಯಾಗಿ ಘೋಷಣೆ ಕೂಡ ಮಾಡಿದ್ದರು. ಈ ಚಿತ್ರ ಶುರುವಾಗುವ ಮುನ್ನವೇ ಅಪ್ಪು ನಮ್ಮನ್ನೆಲ್ಲ ಅಗಲಿದ್ದರು. ಇದೀಗ ಈ ಸಿನಿಮಾವನ್ನ ಪವನ್ ಕುಮಾರ್ ಅವರು ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಪುನೀತ್ ರಾಜಕುಮಾರ್ ಹಾಗು ಪವನ್ ಕುಮಾರ್ ಅವರು ಈ ಸಮಯದಲ್ಲಿ ‘ದ್ವಿತ್ವ’ ಸಿನಿಮಾದ ಚಿತ್ರೀಕರಣದ ಕೊನೆಯ ಹಂತದಲ್ಲಿರುತ್ತಿದ್ದರೇನೋ. ಆದರೆ ಪುನೀತ್ ಅವರ ಅಕಾಲಿಕ ಅಗಲಿಕೆ ಎಲ್ಲವನ್ನು ಒಮ್ಮೆಲೆ ಸ್ಥಬ್ಧವಾಗಿಸಿತ್ತು. ಸದ್ಯ ಪವನ್ ಕುಮಾರ್ ಅವರು ತಮಿಳಿನಲ್ಲಿ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಅದು ಇದೇ ‘ದ್ವಿತ್ವ’ದ ಕಥೆ ಇಟ್ಟುಕೊಂಡು ಎಂದು ಹೇಳಲಾಗುತ್ತಿದೆ. ‘ದ್ವಿತ್ವ’ ಸಿನಿಮಾ ಮುಂದುವರಿಯುತ್ತದೋ? ಇಲ್ಲವೋ? ಎಂಬ ಪ್ರಶ್ನೆಗೆ ಇಲ್ಲಿವರೆಗೂ ಉತ್ತರ ಸಿಗದೇ ಇದ್ದರೂ, ಪವನ್ ಕುಮಾರ್ ಅವರ ಈ ಹೊಸ ಪ್ರಾಜೆಕ್ಟ್ ಹಾಗು ಇದರಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿರುವ ನಟರ ಹೆಸರು ಕುತೂಹಲ ಹುಟ್ಟಿಸುತ್ತಿದೆ.

ಈಗಾಗಲೇ ‘ಕುಡಿ ಎದಮಾಯಿತೇ’ ಎಂಬ ವೆಬ್ ಸೀರೀಸ್ ಒಂದನ್ನು ತಮಿಳು ಭಾಷೆಯಲ್ಲಿ ಪವನ್ ಕುಮಾರ್ ನಿರ್ದೇಶನ ಮಾಡಿದ್ದರು. ಇದೀಗ ಹೊಸ ಚಿತ್ರವನ್ನ ಮಾಡಲಿದ್ದಾರೆ ಎನ್ನಲಾಗುತ್ತಿದ್ದು, ಈ ಚಿತ್ರಕ್ಕೆ ಮಲಯಾಳಂ ನ ಸ್ಟಾರ್ ನಟ ಫಹಾದ್ ಫಾಸಿಲ್ ಅವರನ್ನು ನಾಯಕರಾಗಿ ನಟಿಸಲು ಕೇಳಿದ್ದಾರಂತೆ. ಫಹಾದ್ ಫಾಸಿಲ್ ಒಬ್ಬ ಮನೋಜ್ಞ ನಟರು. ಶಾಂತ ಹಾಸ್ಯ ಯಾವುದೇ ರೀತಿಯ ಪಾತ್ರವನ್ನು ನಿಭಾಯಿಸಬಲ್ಲವರು. ಹೀಗಾಗಿ ಇದು ‘ದ್ವಿತ್ವ’ ಸಿನಿಮಾವೆ ಆಗಿರಲಿದೆ ಎಂಬ ಅನುಮಾನ ಎಲ್ಲರಲ್ಲಿದೆ. ಈ ವರೆಗೆ ಯಾವುದೇ ರೀತಿಯ ಅಧಿಕೃತ ಘೋಷಣೆ ಬಂದಿಲ್ಲವಾದ್ದರಿಂದ ಯಾವುದು ಖಾತ್ರಿಯಾಗಿಲ್ಲ.