• March 16, 2022

ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಯುವನಟ ದುಷ್ಯಂತ್

ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಯುವನಟ ದುಷ್ಯಂತ್

ಸಿಂಪಲ್ ಸುನಿ ಅವರ ಮುಂದಿನ ಚಿತ್ರ ‘ಗತವೈಭವ’ ಈಗಾಗಲೇ ಜನಪ್ರಿಯತೆ ಪಡೆಯುವಲ್ಲಿ ಸಾಕಷ್ಟು ಯಶಸ್ವಿಯಾಗಿದೆ. ಸಿನಿಮಾದ ಕಡೆಯಿಂದ ಈಗಾಗಲೇ ಬಿಡುಗಡೆಯಾಗಿರುವಂತಹ ‘ಹೀರೋ ಲಾಂಚ್ ವಿಡಿಯೋ’ ಹಾಗು ಅದರ ಇನ್ನಷ್ಟು ತುಣುಕುಗಳನ್ನೊಳಗೊಂಡ ವಿಡಿಯೋ ಎರಡೂ ಸಹ ಜನರನ್ನ ತನ್ನತ್ತ ಬಹುವಾಗಿ ಆಕರ್ಷಿಸಿದ್ದವು. ಈ ಚಿತ್ರದ ಮೂಲಕ ಸುನಿ ಹೊಸ ನಾಯಕರೊಬ್ಬರನ್ನ ತೆರೆಮೇಲೆ ತರಲಿದ್ದಾರೆ. ಅವರೇ ದುಷ್ಯಂತ್ ಶ್ರೀನಿವಾಸ್.

ಟೀಸರ್ ಗಳಲ್ಲಿನ ತಮ್ಮ ಅಭಿನಯದಿಂದ ಜನಮಾನಸದೊಳಗಿಳಿದಿರುವ ದುಷ್ಯಂತ್ ಸದ್ಯ ಹುಟ್ಟುಹಬ್ಬದ ಸಡಗರದಲ್ಲಿದ್ದಾರೆ. ಮಾರ್ಚ್ 14ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಂಡ ಇವರು, ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿಕೊಟ್ಟು, ಅಲ್ಲಿನ ಶ್ರೀಗಳಾದ ಸಿದ್ದಲಿಂಗ ಮಹಾಸ್ವಾಮಿ ಗುರುಗಳ ಆಶೀರ್ವಾದ ಪಡೆದರು.

ಸತತ ಮೂರು ವರ್ಷಗಳಿಂದ ನಟನೆ, ನೃತ್ಯ, ಸಾಹಸ ಈ ಎಲ್ಲ ವಿಭಾಗದಲ್ಲೂ ತರಬೇತಿ ಪಡೆಯುತ್ತಿದ್ದ ದುಷ್ಯಂತ್ ಅವರು ಇದೀಗ ಸುನಿ ಅವರ ‘ಗತವೈಭವ’ ಚಿತ್ರದಿಂದ ಚಂದನವನಕ್ಕೆ ಪಾದರ್ಪಣೆ ಮಾಡಲಿದ್ದಾರೆ. MLA ಶ್ರೀನಿವಾಸ್ ಅವರ ಪುತ್ರನ್ನಾಗಿದ್ದರು ಸಹ, ತಂದೆಯ ಹೆಸರನ್ನ ಬಳಸದೆ ತನ್ನ ಸಾಮರ್ಥ್ಯದಿಂದಲೇ ಏನಾದರೂ ಸಾಧಿಸಬೇಕೆಂದು ತಾವು ಪ್ರೀತಿಸೋ ಚಿತ್ರರಂಗವನ್ನ ಸೇರಿದ್ದಾರೆ ದುಷ್ಯಂತ್.