• May 3, 2022

ತೆಲುಗು ದಿಗ್ಗಜನ ಜೊತೆ ಬಣ್ಣ ಹಚ್ಚಲಿದ್ದಾರೆ ದುನಿಯಾ ವಿಜಿ; ಟೈಟಲ್ ಫಿಕ್ಸ್.

ತೆಲುಗು ದಿಗ್ಗಜನ ಜೊತೆ ಬಣ್ಣ ಹಚ್ಚಲಿದ್ದಾರೆ ದುನಿಯಾ ವಿಜಿ; ಟೈಟಲ್ ಫಿಕ್ಸ್.

‘ಸಲಗ’ ಎಂಬ ಒಂದೇ ಒಂದು ಚಿತ್ರ ದುನಿಯಾ ವಿಜಿ ಅವರ ಸಿನಿಪಯಣವನ್ನೇ ಬದಲಾಯಿಸಿತು ಎಂದರೆ ತಪ್ಪಾಗಲಾಗದು. ಸಾಲು ಸಾಲು ಚಿತ್ರಗಳು ಸೋಲು ಕಂಡಾಗ ಇನ್ನೇನು ದುನಿಯಾ ವಿಜಯ್ ಅವರು ಸಿನಿಮಾರಂಗದಿಂದ ಹೊರಹೊರಾಡುತ್ತಾರೆ ಎಂದು ಎಲ್ಲರು ಗುಸು ಗುಸು ಎನ್ನುತ್ತಿದ್ದರು. ಅಂತ ಸಮಯದಲ್ಲಿ ವಿಜಿ ಇಟ್ಟ ಹೆಜ್ಜೆ ‘ಸಲಗ’. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಆನೆ ನಡೆದ ದಾರಿಯೇ ಆಗಿತ್ತು. ‘ಸಲಗ’ ಚಿತ್ರದಿಂದ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಅದ್ಭುತ ಯಶಸ್ಸು ಕಂಡ ವಿಜಿಗೆ ಹಿಂತಿರುಗಿ ನೋಡುವ ಪ್ರಮೇಯವೇ ಬರುತ್ತಿಲ್ಲ.

ದುನಿಯಾ ವಿಜಿ ಅವರ ಮುಂದಿನ ಚಿತ್ರವನ್ನ ಮತ್ತೊಮ್ಮೆ ಅವರೇ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಶೀರ್ಷಿಕೆಯು ಎಲ್ಲರೆದುರು ಇಟ್ಟಾಗಿದೆ. ‘ಭೀಮ’ನಾಗಿ ಅಭಿಮಾನಿಗಳ ಮುಂದೆ ಬರಲು ಭರದಿಂದ ತಯಾರಿ ಮಾಡಿಕೊಳ್ಳುತ್ತಿರುವ ವಿಜಿ ಇದೀಗ ತೆಲುಗುವಿನ ದಿಗ್ಗಜರೊಬ್ಬರೊಂದಿಗೆ ನಟಿಸಲು ಸಜ್ಜಾಗಿದ್ದಾರೆ. ವಿಜಿ ಅವರಿಗೆ ನಟಿಸಲು ಬಂದಿರುವುದು ಬೇರಾರಿಂದಲೂ ಅಲ್ಲದೇ, ಬಾಲಯ್ಯ ಅವರು ನಟಿಸುತ್ತಿರುವ ಚಿತ್ರವೊಂದರಿಂದ. ನಂದಮೂರಿ ಬಾಲಕೃಷ್ಣ ಯಾನೆ ಬಾಲಯ್ಯನವರ ಮುಂದಿನ ಚಿತ್ರದಲ್ಲಿ ವಿಜಿ ಮುಖ್ಯ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ.

ಗೋಪಿಚಂದ್ ಮಲ್ಲಿನೇನಿ ನಿರ್ದೇಶನದ ಈ ಚಿತ್ರದಲ್ಲಿ ದುನಿಯಾ ವಿಜಯ್ ಖಳನಾಯಕನಾಗಿ ಕಾಣಿಸಕೊಳ್ಳಲಿದ್ದಾರೆ. ಮಸಲಿ ಮಗುಡು ಪ್ರತಾಪ್ ರೆಡ್ಡಿ ಎಂಬ ರಗಡ್ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ ವಿಜಿ. ಇದೀಗ ಚಿತ್ರತಂಡ ಚಿತ್ರದ ಶೀರ್ಷಿಕೆಯನ್ನ ನಿರ್ಧರಿಸಿದೆ. ಬಾಲಯ್ಯನವರ 107ನೇ ಚಿತ್ರವಾಗಿರುವ ಈ ಸಿನಿಮಾಗೆ ‘ಅಣ್ಣಗಾರು’ ಎಂಬ ಪವರ್ ಫುಲ್ ಟೈಟಲ್ ಇಡಲಾಗಿದೆ. ‘ಮೈತ್ರಿ ಮೂವೀಸ್’ ನಿರ್ಮಾಣದಲ್ಲಿ ಮೂಡಿಬರುತ್ತಿರೋ ಈ ಚಿತ್ರದಲ್ಲಿ ಬಾಲಯ್ಯನವರಿಗೆ ನಾಯಕಿಯಾಗಿ ಶೃತಿ ಹಾಸನ್ ಆಯ್ಕೆಯಾಗಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್ ಹಾಗು ಲಾಲ್ ಅವರು ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.ತಮನ್ ಎಸ್ ಅವರ ಸಂಗೀತ ಚಿತ್ರಕ್ಕೆ ಕಳೆ ನೀಡಲಿದೆ. ‘ಬಾಲಯ್ಯನವರ ಜೊತೆ ನಟಿಸಲು ತುಂಬಾ ಹೆಮ್ಮೆಯಾಗುತ್ತದೆ. ಈ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಿರ್ದೇಶಕರಿಗೂ, ಅವಕಾಶಕ್ಕಾಗಿ ಮೈತ್ರಿ ಮೂವೀಸ್ ಹಾಗು ಬಾಲಯ್ಯನವರಿಗೂ ಧನ್ಯವಾದಗಳು” ಎಂದಿದ್ದಾರೆ ವಿಜಿ.