• May 29, 2022

ದೊರೆಸಾನಿ ರೂಪಿಕಾ ಮುಡಿಗೇರಿದ ಪ್ರತಿಷ್ಟಿತ ಪ್ರಶಸ್ತಿ

ದೊರೆಸಾನಿ ರೂಪಿಕಾ ಮುಡಿಗೇರಿದ ಪ್ರತಿಷ್ಟಿತ ಪ್ರಶಸ್ತಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದೊರೆಸಾನಿ ಧಾರಾವಾಹಕಯಲ್ಲಿ ನಾಯಕಿ ದೀಪಿಕಾ ಆಗಿ ನಟಿಸುತ್ತಿರುವ ರೂಪಿಕಾ ಅವರು ಸಾಧನೆಗೆ ಗರಿಮೆಯೊಂದು ದೊರೆತಿದೆ. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು ಸದ್ಯ ನಾಯಕಿಯಾಗಿ ಮೋಡಿ ಮಾಡುತ್ತಿರುವ ರೂಪಿಕಾ ಆರ್ಯಭಟ ಅಂತರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇತ್ತೀಚೆಗಷ್ಟೇ ತಾವು ಆರ್ಯಭಟ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ರೂಪಿಕಾ”ಚಿತ್ರರಂಗದಲ್ಲಿ ನಟಿಯಾಗಿ ನಾನು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಬಾರಿಯ ೪೭ನೇ ಸಾಲಿನ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು. ಪ್ರಶಸ್ತಿಯನ್ನು ಪ್ರದಾನ ಮಾಡಿದ ಖ್ಯಾತ ನ್ಯಾಯಾಧೀಶರಾದ ಶ್ರೀಯುತ ಅರಳಿ ನಾಗರಾಜು, ಹಾಗೂ ದೂರದರ್ಶನದ ಮಾಜಿ ನಿರ್ದೇಶಕರು ಮತ್ತು ಹಾಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಆದ ಶ್ರೀಯುತ ಮಹೇಶ್ ಜೋಷಿ, ಮತ್ತು ಪದ್ಮಶ್ರೀ ಬಿರುದಾಂಕಿತರಾದ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅಮ್ಮನಿಗೆ ನನ್ನ ಪ್ರಣಾಮಗಳು” ಎಂದು ಬರೆದುಕೊಂಡಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬೆಳ್ಳಿಚುಕ್ಕಿ ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ನಟನಾ ಜರ್ನಿ ಶುರು ಮಾಡಿದ ರೂಪಿಕಾ ಮುಂದೆ ಬದುಕು, ಅವಳ ಮನೆ ಧಾರಾವಾಹಿಗಳಲ್ಲಿ ನಟಿಸಿದರು.

ಎಸ್.ನಾರಾಯಣ್ ನಿರ್ದೇಶನದ ಚೆಲುವಿನ ಚಿಲಿಪಿಲಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ರೂಪಿಕಾ ತದ ನಂತರ ಮಂಜರಿ, ರುದ್ರಾಕ್ಷಿ ಪುರ, ಥರ್ಡ್ ಕ್ಲಾಸ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಡೈಮಂಡ್ ಕ್ರಾಸ್ ನಲ್ಲಿ ಈಕೆ ನಟಿಸಿದ್ದು ಅದು ತೆರೆ ಕಾಣಬೇಕಿದೆ. ತಮಿಳಿನ ಚಿಲ್ ಬ್ರೋ ಸಿನಿಮಾದಲ್ಲಿ ನಟಿಸುವ ಮೂಲಕ ಪರಭಾಷೆಯ ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸುತ್ತಿರುವ ರೂಪಿಕಾ ರಂಗಭೂಮಿ ಕಲಾವಿದೆ ಹೌದು.

ಬೆನಕ, ಪ್ರಭಾತ್, ಸೂರ್ಯ ಕಲಾವಿದರುಗಳು ತಂಡದಲ್ಲಿ ಗುರುತಿಸಿಕೊಂಡಿದ್ದ ರೂಪಿಕಾ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳಲ್ಲಿ ಅಭಿನಯಿಸಿದ ಪ್ರತಿಭೆ. ಭರತನಾಟ್ಯ ಕಲಾವಿದೆಯಾಗಿರುವ ರೂಪಿಕಾ ಮಹಾನಗರಿ ಬೆಂಗಳೂರಿನಲ್ಲಿ ಗೆಜ್ಜೆ ಎನ್ನುವ ನೃತ್ಯ ಸ್ಟುಡಿಯೋವನ್ನು ಶುರು ಮಾಡಿದ್ದಾರೆ. ಆಸಕ್ತರಿಗೆ ನೃತ್ಯ ತರಬೇತಿ ನೀಡುವ ರೂಪಿಕಾಗೆ ನೃತ್ಯದಲ್ಲಿ ಎಂಎ, ಪಿಎಚ್ ಡಿ ಪದವಿ ಪಡೆಯುವ ಆಸೆ.