• June 6, 2022

ಪ್ರಾಕ್ಟಿಕಲ್ ಹುಡುಗಿಯಾಗಿ ಬರುತ್ತಿದ್ದಾರೆ ದಿವ್ಯಾ ಉರುಡುಗ

ಪ್ರಾಕ್ಟಿಕಲ್ ಹುಡುಗಿಯಾಗಿ ಬರುತ್ತಿದ್ದಾರೆ ದಿವ್ಯಾ ಉರುಡುಗ

ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಚಿಟ್ಟೆ ಹೆಜ್ಜೆ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ದಿವ್ಯಾ ಉರುಡುಗ ಆಕಸ್ಮಿಕವಾಗಿ ಬಣ್ಣದ ನಂಟು ಬೆಳೆಸಿಕೊಂಡ ಚೆಂದುಳ್ಳಿ ಚೆಲುವೆ. ಚಿಟ್ಟೆ ಹೆಜ್ಜೆ ಧಾರಾವಾಹಿಯ ನಂತರ ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಧಾರಾವಾಹಿಗಳಲ್ಲಿ ಅಭಿನಯಿಸಿರುವ ದಿವ್ಯಾ ಉರುಡುಗ ಕೇವಲ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಮೋಡಿ ಮಾಡಿದ್ದಾರೆ.

ಹುಲಿರಾಯ ಸಿನಿಮಾದ ಲಚ್ಚಿಯಾಗಿ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ದಿವ್ಯಾ ಉರುಡುಗ ಗೆ ಅದೃಷ್ಟ ದೇವತೆ ಅಸ್ತು ಎಂದಿದ್ದರು. ಮುಂದೆ ಧ್ವಜ, ಫೇಸ್ 2 ಫೇಸ್, ಜೋರು, ಗಿರ್ಕಿ, ರಾಂಚಿ ಸಿನಿಮಾಗಳಲ್ಲಿ ನಟಿಸಿ ಸೈ ಮಾಡಿಕೊಂಡಿರುವ ದಿವ್ಯಾ ಸದ್ದು ಮಾಡಲು ಕಾರಣ ಬಿಗ್ ಬಾಸ್.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ದಿವ್ಯಾ ಮಾತು, ನಡವಳಿಕೆ, ಟಾಸ್ಕ್ ಗಳ ಮೂಲಕ ವೀಕ್ಷಕರ ಮನ ಗೆದ್ದರು ಮಾತ್ರವಲ್ಲದೇ ಕದ್ದರು.

ದೊಡ್ಮನೆಯಿಂದ ಬಂದ ನಂತರ ಪದವಿಪೂರ್ವ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿರುವ ದಿವ್ಯಾ ಅವರು ಇದೀಗ ಮಗದೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಹೌದು, ತಮ್ಮ ಚೊಚ್ಚಲ ಸಿನಿಮಾ ನಿರ್ದೇಶಕರಾಗಿರುವ ಅರವಿಂದ್ ಕೌಶಿಕ್ ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿ ಈಕೆ ಆಯ್ಕೆಯಾಗಿದ್ದಾರೆ.

ಇನ್ನು ಹೆಸರಿಡಬೇಕಾಗಿರುವ ಈ ಚಿತ್ರದ ಶೂಟಿಂಗ್ ಶೀಘ್ರದಲ್ಲಿ ಆರಂಭವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ದಿವ್ಯಾ “ಉತ್ತಮ ಕತೆಯಾಗಿದ್ದ ಕಾರಣ ಕೇಳಿದ ಕೂಡಲೇ ನಟಿಸಲು ಒಪ್ಪಿಕೊಂಡೆ ” ಎನ್ನುತ್ತಾರೆ.

ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ದಿವ್ಯಾ ಉರುಡುಗ “ನಾನು ಬಹಳ ಸ್ಕ್ರಿಪ್ಟ್ ಕೇಳುತ್ತಿದ್ದೇನೆ. ಅರವಿಂದ್ ಕೌಶಿಕ್ ಅತ್ಯುತ್ತಮ ನಿರ್ದೇಶಕ ಹೌದು. ನನ್ನ ಮೊದಲ ಸಿನಿಮಾ ಹುಲಿರಾಯದ ನಿರ್ದೇಶಕರೂ ಹೌದು. ಇದೀಗ ಮತ್ತೆ ಅವರೊಂದಿಗೆ ನಟಿಸುತ್ತಿರುವುದು ಖುಷಿ ನೀಡಿದೆ” ಎಂದು ಹೇಳಿದ್ದಾರೆ.

ಸಿನಿಮಾದ ಬಗ್ಗೆ ಮಾತನಾಡಿರುವ ದಿವ್ಯಾ ಉರುಡುಗ ” ಇದೊಂದು ಪ್ರೇಮಕಥೆಯಾಗಿದ್ದು ಇದರಲ್ಲಿ ನಾನು ಪ್ರಾಕ್ಟಿಕಲ್ ಹುಡುಗಿಯಾಗಿ ನಟಿಸುತ್ತಿದ್ದೇನೆ. ವಾಸ್ತವಕ್ಕೆ ಹತ್ತಿರವಿರುವ ಪಾತ್ರ ಇದು” ಎನ್ನುತ್ತಾರೆ. ಇನ್ನು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈಕೆ ವೆಬ್ ಸರಣಿಯಲ್ಲೂ ಬಣ್ಣ ಹಚ್ಚುತ್ತಿದ್ದಾರೆ.