• June 20, 2022

ಮುಖ್ಯಮಂತ್ರಿಗಳಿಗೆ ಪತ್ರ ಬರೆದ ನಿರ್ದೇಶಕ ಮಂಸೋರೆ!!

ಮುಖ್ಯಮಂತ್ರಿಗಳಿಗೆ ಪತ್ರ ಬರೆದ ನಿರ್ದೇಶಕ ಮಂಸೋರೆ!!

‘ನಾತಿಚರಾಮಿ’ ಹಾಗು ‘ಆಕ್ಟ್ 1978’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದ ನಿರ್ದೇಶಕ ಮಂಸೋರೆ ಅವರು. ಸಾಮಾನ್ಯವೇ ಆಗಿರೋ ವಿಶೇಷ ಕಥೆ, ವಿಭಿನ್ನ ಸಿನಿಮಾ ಇವರ ಟ್ರೇಡ್ ಮಾರ್ಕ್. ಹಲವು ಪ್ರಶಸ್ತಿಗಳನ್ನೂ, ಪ್ರೇಕ್ಷಕರ ಪ್ರಶಂಸೆಗಳನ್ನು ತನ್ನದಾಗಿಸಿಕೊಂಡಿರುವ ಮಂಸೋರೆ ಅವರು ಇಂದು ನಾಡ ದೊರೆಗೆ ಪತ್ರ ಬರೆದಿದ್ದು, ಪತ್ರದಲ್ಲಿ ಬಹು ಸೂಕ್ಷ್ಮ ವಿಷಯದ ಬಗ್ಗೆ ಮಾತನಾಡಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’ ಚಿತ್ರವನ್ನು ಬಹುಪಾಲು ಜನರು ಕಂಡು ಕಣ್ಣಿಗೊತ್ತಿಕೊಂಡಿದ್ದಾರೆ. ಸದ್ಯ ಈ ಸಿನಿಮಾಗೆ ಸೇವಾ ಹಾಗು ಸರಕು ತೆರಿಗೆ ಸ್ವೀಕರಿಸುವಂತಿಲ್ಲ ಎಂದು ರಾಜ್ಯ ಸರ್ಕಾರದ ಆದೇಶ ಹೊರಬಿದ್ದಿದೆ. ಈ ವಿಷಯದ ಕುರಿತಾಗಿಯೇ ಮಂಸೋರೆ ಅವರು ಪತ್ರ ಬರೆದಿರುವುದು. ಪತ್ರದ ಸಾರಾಂಶ ಇಂತಿತ್ತು, ” ಮಾನ್ಯ ಸರ್ಕಾರವು ‘777 ಚಾರ್ಲಿ’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ್ದು ಸಂತಸ ತಂದಿದೆ. ಇದು ಕನ್ನಡ ಸಿನಿಮಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಇದೊಂದೇ ಸಿನಿಮಾಗೆ ಯಾಕೀ ವಿನಾಯಿತಿ. ಈ ಹಿಂದೆ ಯಾವುದೋ ಅನ್ಯಭಾಷೆಯ ಸಿನಿಮಾಗೂ ಈ ರೀತಿಯ ವಿನಾಯಿತಿ ನೀಡಿದ್ದರೆಂದು ಯಾವುದೋ ಪತ್ರಿಕೆಯಲ್ಲಿ ಓದಿದ ನೆನಪು. ಇದಕ್ಕಿಂತ ಮುಂಚೆ ಕನ್ನಡ ನಾಡಿನಲ್ಲೇ ಚಿತ್ರೀಕರಣ ಗೊಳ್ಳುತ್ತಿದ್ದ ಕನ್ನಡ ಸಿನಿಮಾಗಳಿಗೆ ತೆರಿಗೆಯೇ ಇರುತ್ತಿರಲಿಲ್ಲ. ಅದು ಬಂದದ್ದು ನಿಮ್ಮದೇ ಬಿಜೆಪಿ ಸರ್ಕಾರ ಹೊರತಂದ ಜಿ ಎಸ್ ಟಿ ಇಂದ. ಈ ಹಿಂದೆ ಚಲನಚಿತ್ರಗಳಿಗೆ ತೆರಿಗೆ ವಿಧಿಸಲು ಹೊರಟಾಗ ಅಣ್ಣಾವ್ರೇ ಸಿನಿಮಾ ಬಿಟ್ಟು ಊರಿಗೆ ಹೊರಡೋ ನಿರ್ಧಾರದಲ್ಲಿದ್ದರು. ಅವರನ್ನು ಸಮಾಧಾನ ಪಡಿಸಿ, ನಿರ್ಧಾರವನ್ನ ಸರ್ಕಾರ ಹಿಂತೆಗೆದುಕೊಂಡಿತ್ತಂತೆ. ಹೀಗಿರುವಾಗ ಪ್ರಸ್ತುತ ನಿರ್ಮಾಪಕರುಗಳ ಹೊಟ್ಟೆಯ ಮೇಲೆ ಹೊಡೆದು, ಸಿನಿಮಾಗಳ ಮೇಲೆ ತೆರಿಗೆ ವಿಧಿಸುತ್ತಿದ್ದೀರಿ.

ಶ್ವಾನದ ಕಥೆಯಿರುವ ಕಾರಣಕ್ಕೆ, ನಿರ್ಮಾಪಕರು ಕೇಳಿದ ಕಾರಣಕ್ಕೆ ಆ ಒಂದು ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ್ದೀರಿ. ಹಾಗಾದರೆ ಈ ತೆರಿಗೆಯನ್ನ ತಾವು ತಮ್ಮ ಜೇಬಿನಿಂದ ನೀಡುತ್ತೀರಾ ಎಂಬ ಪ್ರಶ್ನೆಯನ್ನು ಡಾ| ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಡಿಯಲ್ಲಿ ಹಕ್ಕಿರುವ ಕಾರಣ ಕೇಳುತ್ತಿದ್ದೇನೆ. ಕನ್ನಡದಲ್ಲಿ ಶ್ವಾನಕ್ಕಿಂತಲೂ ಮಿಗಿಲಾದ ಹಲವು ಮುಗ್ಧ ಮಾನವ ಜೀವಗಳ ನಿದರ್ಶನವಿರುವ ಹಲವು ಸಿನಿಮಾಗಳು ಬಂದಿವೆ. ಉದಾಹರಣೆಗೆ, ಪೆಡ್ರೋ, ಕೋಳಿತಾಳ್, ಡೊಳ್ಳು, ದಾರಿ ಯಾವುದಯ್ಯ ವೈಕುಂಠಕೆ ಇತ್ಯಾದಿ. ಯಾವೊಂದು ನಿರ್ಮಾಪಕರೂ ಸಹ ತಮ್ಮ ಸಿನಿಮಾಗೆ ಮಾತ್ರ ತೆರಿಗೆ ಹೊರಿಸದಂತೆ ಮನವಿ ಮಾಡುವಷ್ಟು ಸ್ವಾರ್ಥಿಗಳಾಗಿರುವುದಿಲ್ಲ. ಹಾಗಾಗಿ ನಾನು ಕೇಳಿಕೊಳ್ಳುವುದೇನೆಂದರೆ, ಕನ್ನಡ ನಾಡಿನ ಸ್ವಂತ ಸಿನಿಮಾಗಳಿಗೆ ಮೊದಲಿನಂತೆಯೇ ತೆರಿಗೆ ವಿನಾಯಿತಿ ನೀಡಬೇಕೆಂಬುದು. ಈ ಬಗ್ಗೆ ನೀವು ಯೋಚಿಸುತ್ತೀರಿ ಎಂಬ ಆಶಯದಿಂದ ಈ ಪತ್ರ ಬರೆಯುತ್ತಿದ್ದೇನೆ. ” ಎಂದು ತಮ್ಮ ಆಲೋಚನೆಯನ್ನು ಪಾತ್ರದಲ್ಲಿ ತುಂಬಿದ್ದಾರೆ ಮಂಸೋರೆ ಅವರು.

‘777 ಚಾರ್ಲಿ’ ಚಿತ್ರಮಂದಿರಗಳಲ್ಲಿ ತನ್ನ ಯಶಸ್ವಿ ಎರಡನೇ ವಾರದತ್ತ ಮುನ್ನುಗ್ಗುತ್ತಿದೆ. ಈ ನಡುವೆ ತೆರಿಗೆ ವಿನಾಯಿತಿ ಚಿತ್ರತಂಡಕ್ಕೆ ಸಂತಸ ತಂದಿದೆ. ಸಿನಿಮಾ ನೋಡಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಹ ಭಾವುಕಾರಾಗಿ ಕಂಬನಿ ಮಿಡಿದಿದ್ದರು. ಸದ್ಯ ಈ ತೆರಿಗೆ ವಿನಾಯಿತಿ ವಿಷಯ ಅಲ್ಲಲ್ಲಿ ಪರ-ವಿರೋಧದ ಚರ್ಚೆಗೆ ವೇದಿಕೆ ತಯಾರು ಮಾಡಿಟ್ಟಿದೆ.

‘ಹರಿವು’,’ನಾತಿಚರಾಮಿ’ ಹಾಗು ‘ಆಕ್ಟ್ 1978’ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಮಂಸೋರೆ ಅವರು ಇದೀಗ ‘19.20.21’ ಎಂಬ ವಿಭಿನ್ನ ಶೀರ್ಷಿಕೆಯುಳ್ಳ ಸಿನಿಮಾ ಮಾಡುತ್ತಿದ್ದಾರೆ. ಚಿತ್ರೀಕರಣ ನಡೆಯುತ್ತಿರುವ ಈ ಚಿತ್ರ ನೈಜ ಘಟನೆಗಳ ಆಧಾರಿತ ಕಥೆಯಾಗಿರಲಿದೆ.