• May 16, 2022

ಸ್ಮೈಲ್ ಶ್ರೀನು ಬೆನ್ನು ತಟ್ಟಿದ ಹಿರಿಯ ನಿರ್ದೇಶಕ ಕೆ.ಆರ್.ಆರ್

ಸ್ಮೈಲ್ ಶ್ರೀನು ಬೆನ್ನು ತಟ್ಟಿದ ಹಿರಿಯ ನಿರ್ದೇಶಕ ಕೆ.ಆರ್.ಆರ್

ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ನಿರ್ದೇಶನದ ‘ಓ ಮೈ ಲವ್’ ಹಾಡು ಹಾಗೂ ಗ್ಲಿಂಪ್ಸ್ ಸಖತ್ ಸದ್ದು ಮಾಡುತ್ತಿವೆ. ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಈ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಇದೀಗ ತೆಲುಗಿನ ಖ್ಯಾತ ಹಿರಿಯ ನಿರ್ದೇಶಕ ಕೆ.ರಾಘವೇಂದ್ರ ರಾವ್ ‘ಓ ಮೈ ಲವ್’ ಗ್ಲಿಂಪ್ಸ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಲವಾರು ನಿರ್ದೇಶಕರಿಗೆ, ಯುವ ಪ್ರತಿಭೆಗಳಿಗೆ ಗಾಡ್ ಫಾದರ್ ಆಗಿರುವ ಕೆ.ರಾಘವೇಂದ್ರ ರಾವ್, ಕನ್ನಡ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಸ್ಮೈಲ್ ಶ್ರೀನು ಹಾಗೂ ಇಡೀ ಚಿತ್ರತಂಡ ಖುಷಿಯಲ್ಲಿದೆ. ಹೈದರಾಬಾದ್’ನಲ್ಲಿರುವ ಕೆ.ಆರ್.ಆರ್ ಕಚೇರಿಯಲ್ಲಿ ‘ಓ ಮೈ ಲವ್’ ಗ್ಲಿಂಪ್ಸ್ ವೀಕ್ಷಿಸಿ ಸ್ಮೈಲ್ ಶ್ರೀನು ಪ್ರಯತ್ನಕ್ಕೆ ಬೆನ್ನು ತಟ್ಟಿದ್ದಾರೆ. ‘ಇತ್ತೀಚೆಗೆ ಕನ್ನಡ ಸಿನಿಮಾಗಳ ಗುಣಮಟ್ಟ ದೊಡ್ಡ ಮಟ್ಟದಲ್ಲಿದೆ. ಎಲ್ಲಾ ಸಿನಿಮಾಗಳೂ ಹೀಗೆ ಬರಬೇಕು. ಹೊಸ ಪ್ರತಿಭೆಗಳು ಹೊಸ ಆಲೋಚನೆಗಳೊಂದಿಗೆ ಬರುತ್ತಾರೆ. ಈ ಗ್ಲಿಂಪ್ಸ್ ನೋಡುತ್ತಿದ್ದರೆ ಸಿನಿಮಾ ಖಂಡಿತಾ ಚೆನ್ನಾಗಿರುತ್ತದೆ. ಬಿಡುಗಡೆಯಾದ ನಂತರ ಒಳ್ಳೆಯ ಯಶಸ್ಸು ಸಿಗಲಿ. ಸಾಧ್ಯವಾದರೆ ತೆಲುಗಿಗೂ ಈ ಸಿನಿಮಾವನ್ನು ಡಬ್ ಮಾಡಿ ಎಂದಿರುವ ಅವರು, ನಮ್ಮಂಥ ಹಿರಿಯರ ಆಶೀರ್ವಾದ ಹಾಗೂ ಸಪೋರ್ಟ್ ಸದಾ ನಿಮ್ಮಂಥ ಪ್ರತಿಭೆಗಳಿಗೆ ಇದ್ದೇ ಇರುತ್ತದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೆ.ರಾಘವೇಂದ್ರ ರಾವ್ ಅವರ ಮಾತುಗಳಿಂದ ಪುಳಕಿತರಾಗಿರುವ ಸ್ಮೈಲ್ ಶ್ರೀನು, ‘ಓ ಮೈ ಲವ್’ ಮೊದಲಿಗೆ ಕನ್ನಡದಲ್ಲಿ ಬಿಡುಗಡೆ ಮಾಡಿ ಬಳಿಕ ತೆಲುಗಿನಲ್ಲಿ ಬಿಡುಗಡೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಹಾಡು ಹಾಗೂ ಟ್ರೇಲರ್ ಹರಿಬಿಡುವ ಯೋಜನೆಯಲ್ಲಿದ್ದಾರೆ ಶ್ರೀನು.

ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಸಿನಿಮಾಕ್ಕೆ ಕಥೆ ಬರೆದು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ ಜಿ.ರಾಮಾಂಜಿನಿ. ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ ಸ್ಮೈಲ್ ಶ್ರೀನು. ಚರಣ್ ಅರ್ಜುನ್ ಸಂಗೀತ ನೀಡಿರುವ ಈ ಚಿತ್ರದ ಎಲ್ಲಾ ಹಾಡುಗಳಿಗೆ ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಖ್ಯಾತ ಕೊರಿಯೋಗ್ರಫರ್ ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಅಕ್ಷಿತ್ ಶಶಿಕುಮಾರ್ ಹಾಗೂ ಕೀರ್ತಿ ಕಲ್ಕೆರೆ ಚಿತ್ರ ನಾಯಕ-ನಾಯಕಿ. ಹಿರಿಯ ನಿರ್ದೇಶಕ ಎಸ್.ನಾರಾಯಣ್, ಸಾಧುಕೋಕಿಲ, ದೇವಗಿಲ್, ಟೆನ್ನಿಸ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.