- July 11, 2022
ತೆರೆಮೇಲೆ ಒಂದಾಗಲಿದ್ದಾರೆ ದಿಗಂತ್ ರಿಷಬ್.


ಕನ್ನಡ ಚಿತ್ರರಂಗ ಸದ್ಯ ಎಲ್ಲ ರೀತಿಯ ಸಿನಿಮಾಗಳನ್ನು ಕಾಣುತ್ತಿದೆ. ಪಕ್ಕ ಆಕ್ಷನ್ ಸಿನಿಮಾಗಳಿಂದ ಹಿಡಿದು, ಮನಮುದಗೊಳಿಸುವ ಒಂದೊಳ್ಳೆ ಪ್ರೇಮಕತೆಯ ವರೆಗೆ. ಹಾಗೆಯೇ ನಮ್ಮಲ್ಲಿ ಹಾಸ್ಯಬರಿತ ಸಿನಿಮಾಗಳಿಗೇನು ಕಡಿಮೆ ಇಲ್ಲ. ಸದ್ಯ ಎಲ್ಲರನ್ನೂ ನಗಿಸಬಲ್ಲ ಒಂದೊಳ್ಳೆ ಕಾಮಿಡಿ ಸಿನಿಮಾ ತಯಾರಾಗುತ್ತಿದೆ. ಚಿತ್ರದ ತಾರಾಗಣಕ್ಕೆ ಈಗಷ್ಟೇ ಹೆಸರುಗಳು ಸೇರುತ್ತಿದ್ದು, ಈಗ ಹೊರಬಿದ್ದಿರೋ ಎರಡು ಹೆಸರುಗಳು ಸಿನಿಪ್ರಿಯರಿಗೆ ಹೊಸತನ ನೀಡಿದೆ. ಯಾಕೆಂದರೆ ಈ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಹಾಗು ಚಾಕಲೇಟ್ ಹೀರೋ ದಿಗಂತ್ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ.




ರಕ್ಷಿತ್ ಶೆಟ್ಟಿ ಅವರ ಬರವಣಿಗೆಯ ತಂಡವಾದ ‘ದಿ ಸೆವೆನ್ ಒಡ್ಸ್’ ನ ಸದಸ್ಯರುಗಳಲ್ಲಿ ಒಬ್ಬರಾದ ಅಭಿಜಿತ್ ಮಹೇಶ್ ಅವರು ಈ ಸಿನಿಮಾದ ಮೂಲಕ ಮೊದಲ ಬಾರಿ ನಿರ್ದೇಶನ ಮಾಡಲಿದ್ದಾರೆ. “ನಮ್ಮ ತಂಡದ ಪ್ರತಿಯೊಬ್ಬರೂ ಹೊಸ ರೀತಿಯ ಸಿನಿಮಾ ಮಾಬೇಕೆಂಬುದು ನಮ್ಮ ಆಸೆ. ಈ ಕಥೆಯನ್ನ ರಕ್ಷಿತ್ ಅವರ ಮುಂದಿಟ್ಟಾಗ ಸಂತಸದಿಂದ ಒಪ್ಪಿಕೊಂಡರು. ಸದ್ಯ ರಿಷಬ್ ಹಾಗು ದಿಗಂತ್ ಅವರು ಮಾತ್ರ ಫೈನಲ್ ಆಗಿರುವುದು, ಉಳಿದವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರದ ಶೀರ್ಷಿಕೆಯನ್ನು ಮುಹೂರ್ತದ ಸಮಯದಲ್ಲಿಯೇ ತಿಳಿಸುತ್ತೇವೆ. ಇದು ನಮ್ಮ ತಂಡದಿಂದ ಬರಲಿರೋ ಮತ್ತೊಂದು ಸುಮಧುರ ಹಾಸ್ಯ ಕಥೆಯಾಗಿರಲಿದೆ.” ಎನ್ನುತ್ತಾರೆ ಅಭಿಜಿತ್. ಸಿನಿಮಾವನ್ನ ರಕ್ಷಿತ್ ಶೆಟ್ಟಿಯವರ ‘ಪರಮ್ ವಾಹ್ ಸ್ಟುಡಿಯೋಸ್’ ನಿರ್ಮಾಣ ಮಾಡುತ್ತಿದೆ. ‘ಕಿರಿಕ್ ಪಾರ್ಟಿ’,’ಅವನೇ ಶ್ರೀಮನ್ನಾರಾಯಣ’ ಮುಂತಾದ ಸಿನಿಮಾಗಳ ಬರವಣಿಗೆಯಲ್ಲಿ ಕೆಲಸ ಮಾಡಿರುವ ಇವರು ‘ಅವನೇ ಶ್ರೀಮನ್ನಾರಾಯಣ’, ‘777 ಚಾರ್ಲಿ’ ಮುಂತಾದ ಸಿನಿಮಾಗಳಲ್ಲಿನ ಪಾತ್ರಕ್ಕೆ ಬಣ್ಣ ಕೂಡ ಹಚ್ಚಿದ್ದಾರೆ.












