• July 28, 2022

ವಿವಿಧ ಪಾತ್ರಗಳ ಪರಿಚಯ ನೀಡಿದ ‘ವಿಕ್ರಾಂತ್ ರೋಣ’.

ವಿವಿಧ ಪಾತ್ರಗಳ ಪರಿಚಯ ನೀಡಿದ ‘ವಿಕ್ರಾಂತ್ ರೋಣ’.

ಇಂದು(ಜುಲೈ 28) ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಮೇಲೆ ಪ್ರತಿಯೊಬ್ಬ ಸಿನಿಪ್ರೇಮಿಗೂ ಮುಗಿಲಿನೆತ್ತರದ ನಿರೀಕ್ಷೆಯಿದೆ. ಅನೂಪ್ ಭಂಡಾರಿ ಅವರ ಸೃಷ್ಟಿಯಾದ ಈ ‘ವರ್ಲ್ಡ್ ಆಫ್ ಫಾಂಟಮ್’ ಅನ್ನು ನೋಡಲು ಅಭಿಮಾನಿಗಳು ಹಾತೊರೆದು ಕಾಯುತ್ತಿದ್ದಾರೆ. ಹೀಗಿರುವಾಗ ‘ವಿಕ್ರಾಂತ್ ರೋಣ’ ತಂಡ ತನ್ನ ಕಥೆಯ ಪ್ರಮುಖ ಪಾತ್ರಗಳ ಪರಿಚಯ ನೀಡಿದೆ. ವಿಭಿನ್ನವಾಗಿ ವಿಶೇಷವಾಗಿರುವ ಹೆಸರು ಹಾಗು ಪ್ರಯತ್ನಗಳಿಂದ ಈಗಾಗಲೇ ಗಮನ ಸೆಳೆದಿರುವ ಚಿತ್ರ ಇದು. ಈಗ ಹೊರಬಿದ್ದಿರುವ ಪಾತ್ರಗಳ ಹೆಸರಿಗೂ ಅಷ್ಟೇ ತೂಕವಿರುವುದು ಗಮನಾರ್ಹ.

ನಮಗೆಲ್ಲರಿಗೂ ತಿಳಿದಿರುವ ಹಾಗೇ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರು ‘ವಿಕ್ರಾಂತ್ ರೋಣ’ ಪಾತ್ರವನ್ನ ಜೀವಿಸಿದ್ದಾರೆ. ಇವರ ಜೊತೆಗೆ ನಿರೂಪ್ ಭಂಡಾರಿ ಅವರು ‘ಸಂಜು’ ಯಾನೆ ‘ಸಂಜೀವ್ ಗಂಭೀರ’ ಹಾಗು ನೀತಾ ಅಶೋಕ್ ಅವರು ‘ಪನ್ನ’ ಎಂಬ ಪಾತ್ರಗಳಾಗಿ ನಟಿಸಿದ್ದಾರೆ. ಇನ್ನೂ ಪ್ರಖ್ಯಾತ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ಕೂಡ ಚಿತ್ರದಲ್ಲಿ ನಟಿಸಿದ್ದು, ‘ಬಾಲು’ ಯಾನೆ ‘ಬಾಲಕೃಷ್ಣ’ನಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಮಹಾಬಲ’ನಾಗಿ ರಾಮ್ ಬೊಗಡ, ‘ಮುನ್ನ’ ಯಾನೆ ‘ಮೋಹನ್ ಚಂದ್ರ ಬಲ್ಲಾಳ್’ ಆಗಿ ಸಿದ್ದು ಮೂಲಿಮನಿ, ‘ವಿಶ್ವನಾಥ್ ಬಲ್ಲಾಳ್’ ಆಗಿ ರವಿಶಂಕರ್ ಗೌಡ, ಪೊಲೀಸ್ ಕಾನ್ಸ್ಟೇಬಲ್ ‘ಮಂಚೇ ಗೌಡ’ನಾಗಿ ವಿಶ್ವನಾಥ ಕೆ ಸಿ ಹಾಗೆಯೇ ‘ಮೂಸೆ ಕುನ್ನಿ’ಯಾಗಿ ದುಷ್ಯಂತ್ ರೈ ನಟಿಸಿದ್ದಾರೆ. ಸಂಜುವಿನ ತಂದೆಯ ಪಾತ್ರದಲ್ಲಿ ‘ಜನಾರ್ಧನ್ ಗಂಭೀರ’ನಾಗಿ ಮಧುಸೂದನ್ ರಾವ್ ಅವರು ಬಣ್ಣ ಹಚ್ಚಿದ್ದಾರೆ.

ಕನ್ನಡಕ್ಕೆ ‘ರಂಗಿತರಂಗ’ದಂತಹ ಸಿನಿಮಾ ನೀಡಿದ್ದ ಅನೂಪ್ ಭಂಡಾರಿ ಅವರ ಮೂರನೇ ನಿರ್ದೇಶನ ‘ವಿಕ್ರಾಂತ್ ರೋಣ’. ಹಿಂದಿಗಿಂತ ವಿಭಿನ್ನವಾದ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರನ್ನು ನೋಡಲು ಅಭಿಮಾನಿಗಳಂತು ಕಾತರರಾಗಿದ್ದಾರೆ. ಜುಲೈ 28ರಿಂದ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮಾತ್ರವಲ್ಲದೆ ಇಂಗ್ಲೀಷ್ ಭಾಷೆಯಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ.