• March 15, 2022

ಕುತೂಹಲವನ್ನೇ ಕೆರಳಿಸದ ಒಂದು ಥ್ರಿಲರ್ ಕಥೆ.

ಕುತೂಹಲವನ್ನೇ ಕೆರಳಿಸದ ಒಂದು ಥ್ರಿಲರ್ ಕಥೆ.

ತನ್ನ ನಟನೆಯಿಂದಲೇ ಎಂತಹ ಕಥೆಯನ್ನು ಕೂಡ ಆಕರ್ಷಣೀಯವಾಗಿಸಬಲ್ಲ ನಾಯಕನಟ. ಚೋಚ್ಚಲ ಚಿತ್ರದಲ್ಲೇ ಅಪಾರ ಪ್ರಶಂಸೆ ಗಳಿಸಿದ್ದಂತ ನಿರ್ದೇಶಕ. ಈ ಇಬ್ಬರು ಒಂದಾಗಲಿದ್ದಾರೆ ಎಂದಾಗ ಹುಟ್ಟಿದಂತ ನಿರೀಕ್ಷೆಗಳು ಮುಗಿಲು ಮುಟ್ಟಿತ್ತು. ಆದರೆ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಕಾದಿದ್ದು ಒಂದಷ್ಟು ಅಸಮಾಧಾನವಷ್ಟೇ!!

ಮಾರನ್, ಇದು ‘D-16’ ಸಿನಿಮಾ ಖ್ಯಾತಿಯ ನಿರ್ದೇಶಕ ಕಾರ್ತಿಕ್ ನರೇನ್ ಅವರ ಸಿನಿಮಾ. ತಮಿಳಿನ ಪ್ರಖ್ಯಾತ, ಪ್ರಭುದ್ದ ನಟರಲ್ಲಿ ಒಬ್ಬರಾದಂತ ಧನುಷ್ ಅವರು ನಾಯಕರಾಗಿ, ಮಾಳವಿಕ ಮೋಹನನ್ ನಾಯಕಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸತ್ಯಮೂರ್ತಿ ಒಬ್ಬ ಸತ್ಯತತ್ವದ ಪತ್ರಕರ್ತ. ಸತ್ಯವನ್ನೇ ಜನರಿಗೆ ತಲುಪಿಸಬೇಕೆಂಬ ತನ್ನ ಗುರಿಯಿಂದ ಒಬ್ಬ ಪ್ರಭಾವಿ ರಾಜಕಾರಣಿಯನ್ನು ಎದುರು ಹಾಕಿಕೊಂಡು ಅವನಿಂದಲೇ ಸಾವನ್ನಪ್ಪುತ್ತಾನೆ. ತಂದೆಯ ಸಾವನ್ನ ಕಣ್ಣಾರೆ ಕಂಡಿದ್ದ ಕಥಾನಾಯಕ ಮಧಿಮಾರಾನ್, ಯಾನೆ ಮಾರನ್ ಆಗಷ್ಟೇ ಹುಟ್ಟಿದ ತಂಗಿಯನ್ನು ತಾನೇ ನೋಡಿಕೊಳ್ಳುತ್ತಾ ಅಪ್ಪನಂತೆಯೇ ನ್ಯಾಯದ ಸೇವಕನಾಗುತ್ತಾನೆ. ತನ್ನ ತಂಗಿಯನ್ನು ಅಗಾಧವಾಗಿ ಪ್ರೀತಿಸುತ್ತ ಅಪ್ಪನಂತೆಯೇ ತಾನು ಕೂಡ ಒಬ್ಬ ಪತ್ರಕರ್ತನಾಗುತ್ತಾನೆ. ಅವನ ನೇರನುಡಿ, ಸತ್ಯವನ್ನ ಹೇಗಿದೆಯೋ ಹಾಗೇ ಜನರಿಗೆ ತಲುಪಿಸೋ ಕೆಲಸಗಳಿಂದ ಬಹಳ ಬೇಗ ಜನಪ್ರಿಯ ಕೂಡ ಆಗುತ್ತಾನೆ. ಆದರೆ ತನ್ನ ಈ ಸತ್ಯದ ದಾರಿಯಲ್ಲಿ ಏನೆಲ್ಲಾ ತೊಂದರೆಯನ್ನ ಅವನು ಹಾಗು ಅವನ ಹತ್ತಿರದವರು ಅನುಭವಿಸಬೇಕಾಗುತ್ತದೆ, ಅದನ್ನ ಮಾರನ್ ಹೇಗೆ ಪರಿಹರಿಸಿಕೊಳ್ಳುತ್ತಾನೆ ಎನ್ನುವುದೇ ಸಿನಿಮಾದ ಕಥೆ.

ಸಿನಿಮಾದ ಆರಂಭದಲ್ಲೇ ಅಣ್ಣ ತಂಗಿಯ ಪ್ರೀತಿಗೆ ಪ್ರಭಲ ಅಡಿಪಾಯ ಹಾಕೋ ಕಥೆಯು, ಸಿನಿಮಾವನ್ನ ಕೊನೆಗಾಣಿಸುವಾಗ ಕೂಡ ಅಣ್ಣ ತಂಗಿಯ ಪ್ರೀತಿಯನ್ನ ಎತ್ತಿ ಹಿಡಿಯುತ್ತದೆ. ತನ್ನ ತಂಗಿಗೆ ಚಿಕ್ಕ ನೋವಾದರೂ ಸಹಿಸಿಕೊಳ್ಳದ ಅಣ್ಣ, ಅಣ್ಣ ಸದಾ ಸಂತಸದಿಂದಿರಬೇಕೆಂದು ಬಯಸೋ ತಂಗಿ. ಇವರಿಬ್ಬರ ಸಂಬಂಧ-ಸನ್ನಿವೇಶಗಳು ಎಂತವರನ್ನು ಸಹ ಖುಷಿಪಡಿಸುತ್ತದೆ. ತಮ್ಮ ನಟನೆಯಿಂದ ಸದಾ ಸೆಳೆಯುವ ಧನುಷ್ ಅವರ ಮಿಂಚು ಇಲ್ಲಿ ಮಾಯವಾದಂತಿತ್ತು. ಕಥೆಯಲ್ಲಿದ್ದ ಹಲವು ನ್ಯೂನತೆಗಳು ಇದಕ್ಕೆ ಕಾರಣವಾಗಿರಬಹುದು. ಒಬ್ಬ ಪತ್ರಕರ್ತ ನಡೆಸುವ ತನಿಖಾ ಥ್ರಿಲರ್ ಎಂದು ಹೇಳಿಕೊಳ್ಳೋ ಚಿತ್ರದಲ್ಲಿ ಕುತೂಹಲ ಕೆರಳಿಸೋ ಸಂಧರ್ಭಗಳಾಗಲಿ, ಬುದ್ದಿವಂತಿಕೆಗಳಾಗಲಿ ಅಷ್ಟಾಗಿ ಕಾಣಸಿಗುವುದಿಲ್ಲ. ಅಲ್ಲಲ್ಲಿ ಕಥೆ ನೀಡೋ ತಿರುವುಗಳು ಪ್ರಮುಖವಾಗಿದ್ದರೂ ತಮಾಷೆಯಂತಿದ್ದವು.

ಸಮಯ ವ್ಯರ್ಥ ಮಾಡುವಂತ ಹಾಡುಗಳಿಲ್ಲಿಲ್ಲ, ಬೇಡದೆ ಇರೋ ಸಂಧರ್ಭಗಳಿಲ್ಲ. ಒಂದೊಳ್ಳೆ ಮನರಂಜನಾತ್ಮಕ ಚಿತ್ರ ಇದಾಗಿದ್ದರು, ಹೆಸರಿಗೆ ತಕ್ಕಂತ ನ್ಯಾಯ ಕಥೆಯಲ್ಲಿರಲಿಲ್ಲ ಎನ್ನಬಹುದು. ‘ಮಾರನ್’ ಚಿತ್ರ ಚಿತ್ರಮಂದಿರಗಳ ಕದ ತಟ್ಟದೇ, ನೇರವಾಗಿ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ತೆರೆಕಂಡಿದೆ. ಮೂಲತಃ ತಮಿಳ್ ಆಗಿದ್ದರು, ಕನ್ನಡ, ಮಲಯಾಳಂ ಹಾಗು ತೆಲುಗು ಭಾಷೆಯಲ್ಲೂ ಲಭ್ಯವಿದೆ.