• June 10, 2022

ತನ್ನ ನೆಚ್ಚಿನ ‘ಸೆಲೆಬ್ರಿಟಿ’ಗಳಿಗೆ ಧನ್ಯವಾದ ಹೇಳಿದ ‘ಡಿ ಬಾಸ್’

ತನ್ನ ನೆಚ್ಚಿನ ‘ಸೆಲೆಬ್ರಿಟಿ’ಗಳಿಗೆ ಧನ್ಯವಾದ ಹೇಳಿದ ‘ಡಿ ಬಾಸ್’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ ನಟರುಗಳಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರೋ ನಟರುಗಳಲ್ಲಿ ಒಬ್ಬರು. ಅಭಿಮಾನಿಗಳಿಂದ ಪ್ರೀತಿ ಹಾಗು ಗೌರವದಲ್ಲಿ ‘ಡಿ ಬಾಸ್’ ಎಂದೇ ಕರೆಸಿಕೊಳ್ಳುವ ಇವರು, ತನ್ನ ಅಭಿಮಾನಿಗಳನ್ನು ‘ಸೆಲೆಬ್ರಿಟಿ’ಗಳು ಎಂದು ಕರೆವವರು. ಇವರ ಅಭಿಮಾನಿಗಳು ಇವರ ಮೇಲಿಟ್ಟಿರುವ ಅಭಿಮಾನಕ್ಕೆ ಅವರುಗಳೇ ಸಾಟಿ. ಈ ವಿಷಯವನ್ನು ನಿದರ್ಶಸಲು ಇದೀಗ ಡಿ ಬಾಸ್ ಅಭಿಮಾನಿಗಳು ಮತ್ತೊಂದು ಉದಾಹರಣೆಯನ್ನು ಎದುರಿಡುತ್ತಿದ್ದಾರೆ.

ದರ್ಶನ್ ಅವರು ತಮ್ಮ ನೆರನುಡಿಗೆ ಹೆಸರಾದವರು. ಇದೇ ಕಾರಣಕ್ಕೆ ಹಲವರಿಗೆ ಡಿ ಬಾಸ್ ಮೇಲೆ ಮುನಿಸಾಗಿರುವುದು ಉಂಟು. ಸದ್ಯ ಕನ್ನಡ ಮಾಧ್ಯಮಗಳು ದರ್ಶನ್ ಅವರ ಮೇಲೆ ವೈಮನಸ್ಸು ಇಟ್ಟುಕೊಂಡಿದೆ. ದರ್ಶನ್ ಅವರ ಸಿನಿಮಾಗಳ ಬಗೆಗಿನ ಯಾವ ವಿಷಯಗಳನ್ನೂ ಪ್ರದರ್ಶಿಸುವುದಿಲ್ಲ ಎಂದು ಕನ್ನಡ ಮಾಧ್ಯಮಗಳು ನಿರ್ಬಂಧ ಹಾಕಿಕೊಂಡಿವೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹಾಗಾಗಿ ಡಿ ಬಾಸ್ ಅಭಿಮಾನಿಗಳು ಹೊಸ ಯೋಜನೆ ಹಾಕಿಕೊಂಡಿದ್ದಾರೆ. “ಮಾಧ್ಯಮಗಳು ಬಾಸ್ ಸಿನಿಮಾಗಳನ್ನು ಪ್ರಚಾರ ಮಾಡುವುದಿಲ್ಲ. ಹಾಗಾಗಿ ‘ಕ್ರಾಂತಿ’ ಸಿನಿಮಾವನ್ನು ಅವರ ಅಭಿಮಾನಿಗಳಾಗಿ ನಾವುಗಳೇ ಪ್ರಚಾರ ಮಾಡೋಣ. ಪ್ರಾರಂಭದಿಂದ ಬಾಸ್ ಜೊತೆಗೆ ನಿಂತಿದ್ದೇವೆ. ಮುಂದೆಯೂ ಕೂಡ ನಿಲ್ಲೋಣ. ಮಾಧ್ಯಮಗಳ ಪ್ರಚಾರವಿಲ್ಲದೆ ‘ಕ್ರಾಂತಿ’ ಸಿನಿಮಾವನ್ನು ಯಶಸ್ವಿಯಾಗಿಸೋಣ” ಎನ್ನುವ ಯೋಜನೆಯನ್ನು ಡಿ ಬಾಸ್ ಅಭಿಮಾನಿಗಳು ಹಾಕಿಕೊಂಡಿದ್ದು, ಸದ್ಯ ಟ್ವಿಟರ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಟ್ರೆಂಡ್ ಆಗುತ್ತಿದೆ.

ರಾಜ್ಯದಾದ್ಯಂತ ದರ್ಶನ್ ಅವರ ಅಭಿಮಾನಿಗಳಿಂದ ಅಪಾರ ಬೆಂಬಲ ಬರುತ್ತಿದೆ. ಸದ್ಯ ಈ ರೀತಿ ಅಭಿಮಾನಿಗಳು ಬರೆದುಕೊಂಡಿರುವ ಫೋಟೋ ಒಂದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಟ್ವಿಟರ್, ಫೇಸ್ಬುಕ್ ಹಾಗು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. “ಅಂದಿನಿಂದ ಇಂದಿನವರೆಗೂ ನನ್ನ ಜೊತೆಗೆ ನಿಂತಂತಹ ನನ್ನ ‘ಸೆಲೆಬ್ರಿಟಿ’ಗಳಿಗೆ ನಾನು ಚಿರಋಣಿ. ನಿಮ್ಮ ಅಭಿಮಾನವನ್ನು ವರ್ಣಿಸಲು ಪದಗಳೇ ಸಾಲದು” ಎಂದು ಬರೆದುಕೊಂಡಿದ್ದಾರೆ.

‘ಕ್ರಾಂತಿ’ ದರ್ಶನ್ ಅವರ ಮುಂದಿನ ಸಿನಿಮಾ. ವಿ ಹರಿಕೃಷ್ಣ ನಿರ್ದೇಶಸುತ್ತಿರುವ ಈ ಸಿನಿಮಾದಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ರಚಿತ ರಾಮ್ ಬಣ್ಣ ಹಚ್ಚಿದ್ದಾರೆ. ಶೈಲಜ ನಾಗ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಕನ್ನಡ ಶಾಲೆಯ ಬೆಳವಣಿಗೆಗಳ ಬಗೆಗಿನ ಕಥೆ ಹೊಂದಿದೆಯಂತೆ. ‘ಡಿ ಬಾಸ್’ ಎಲ್ಲ ಸಿನಿಮಾಗಳು ಸದಾ ಸುದ್ದಿಯಲ್ಲಿದ್ದೆ ಇರುತ್ತವೆ. ಸದ್ಯ ಅಭಿಮಾನಿಗಳ ಈ ಯೋಜನೆ ಸಿನಿಮಾ ಪ್ರಚಾರಕ್ಕೆ ಇನ್ನಷ್ಟು ಪುಷ್ಟಿ ಕೊಡಲಿದೆ.