• June 12, 2022

ಬರ್ತ್ ಡೇ ಬಾಯ್ ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾಗಳು.

ಬರ್ತ್ ಡೇ ಬಾಯ್ ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾಗಳು.

ಕನ್ನಡ ಕಿರುತೆರೆಯಿಂದ ತಮ್ಮ ನಟನಾ ಪಯಣ ಆರಂಭಿಸಿ ಸದ್ಯ ಬೆಳ್ಳಿತೆರೆಯ ಭರವಸೆಯ ಯುವನಟರಲ್ಲಿ ಒಬ್ಬರಾಗಿದ್ದಾರೆ. ನಟನೆಯಿಂದ ಆರಂಭಿಸಿ ಇದೀಗ ‘ಲವ್ ಮೊಕ್ಟೇಲ್’ ಸಿನಿಮಾಗಳಿಂದ ಒಬ್ಬ ಒಳ್ಳೆಯ ನಿರ್ದೇಶಕನಾಗಿಯೂ ಕನ್ನಡಿಗರ ಮನದಲ್ಲಿ ಉಳಿದುಕೊಂಡಿದ್ದಾರೆ. ಇಂದು(ಜೂನ್ 12) ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಡಾರ್ಲಿಂಗ್ ಕೃಷ್ಣ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

• ಲವ್ ಬರ್ಡ್ಸ್
ಸದ್ಯ ‘ಲವ್ ಮೊಕ್ಟೇಲ್ 2’ ಸಿನಿಮಾದ ಯಶಸ್ಸನ್ನು ಸಂಭ್ರಮಿಸುತ್ತಿರುವ ಕೃಷ್ಣ ಹಾಗು ಮಿಲನ ಕೃಷ್ಣ ದಂಪತಿಗಳು ಮತ್ತೊಮ್ಮೆ ಜೋಡಿಯಾಗಿ ತೆರೆಮೇಲೆ ಬರಲು ಸಿದ್ದರಾಗುತ್ತಿದ್ದಾರೆ. ಪಿ ಸಿ ಶೇಖರ್ ಅವರು ನಿರ್ದೇಶಸುತ್ತಿರುವ ‘ಲವ್ ಬರ್ಡ್ಸ್’ ಸಿನಿಮಾದಲ್ಲಿ ನಾಯಕ ಹಾಗು ನಾಯಕಿಯಾಗಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ಕೃಷ್ಣ ನಟಿಸಲಿದ್ದಾರೆ. ಈ ಚಿತ್ರವನ್ನು ಎಂ ಚಂದ್ರು ಕಡ್ಡಿಪುಡಿ ಅವರು ನಿರ್ಮಿಸುತ್ತಿದ್ದು, ಸಿನಿಮಾಗೆ ಅರ್ಜುನ್ ಜನ್ಯ ಅವರ ಸಂಗೀತವಿರಲಿದೆ.

• ದಿಲ್ ಪಸಂದ್
ಲವರ್ ಬಾಯ್ ಆಗಿಯೇ ಕನ್ನಡ ಚಿತ್ರರಂಗದಲ್ಲಿ ಸ್ಥಾನ ಪಡೆದಿರುವ ರ್ಲಿಂಗ್ ಕೃಷ್ಣ, ಶಿವ ತೇಜಸ್ ಅವರು ನಿರ್ದೇಶಸುತ್ತಿರುವ ಮುಂದಿನ ಸಿನಿಮಾ ‘ದಿಲ್ ಪಸಂದ್’ನಲ್ಲಿ ಇದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥೆಯುಳ್ಳ ಸಿನಿಮಾ ಇದಾಗಿರಲಿದ್ದು ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಹಾಗು ‘ಜೊತೆ ಜೊತೆಯಲಿ’ ಧಾರವಾಹಿ ಖ್ಯಾತಿಯ ಮೇಘ ಶೆಟ್ಟಿ ಅವರು ನಾಯಕಿಯಾಗಿ ನಟಿಸಲಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿರುವ ಈ ಸಿನಿಮಾದ ಮೊದಲ ತುಣುಕು ಕೃಷ್ಣ ಅವರ ಹುಟ್ಟಿದಹಬ್ಬದ ಸಲುವಾಗಿ ಇಂದು ಬಿಡುಗಡೆ ಕಂಡಿದೆ.

• ಶುಗರ್ ಫ್ಯಾಕ್ಟರಿ
ದೀಪಕ್ ಅರಸ್ ಅವರು ನಿರ್ದೇಶಸುತ್ತಿರುವ ‘ಶುಗರ್ ಫ್ಯಾಕ್ಟರಿ’ ಸಿನಿಮಾ ಕೂಡ ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾಗಳಲ್ಲಿ ಒಂದು. ಕೃಷ್ಣ ಹಾಗು ‘ಪಂಚತಂತ್ರ’ ಸಿನಿಮಾ ಖ್ಯಾತಿಯ ಸೋನಲ್ ಮೊಂಟೆರೋ ಜೋಡಿಯಾಗಿ ನಟಿಸುತ್ತಿರುವ ಈ ಸಿನಿಮಾ ತನ್ನ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಕಬೀರ್ ರಫಿ ಅವರ ಸಂಗೀತವಿರುವ ಈ ಸಿನಿಮಾ ಆದಷ್ಟು ಬೇಗ ಚಿತ್ರಮಂದಿರಗಳನ್ನು ಸೇರಲಿದೆ.

• ಲಕ್ಕಿ ಮ್ಯಾನ್
ಕರುನಾಡ ಅಸಂಖ್ಯ ಜನರು ಹಾತೊರೆದು ಕಾಯುತ್ತಿರುವ ಸಿನಿಮಾಗಳಲ್ಲಿ ಲಕ್ಕಿ ಮ್ಯಾನ್ ಕೂಡ ಒಂದು. ಇದಕ್ಕೆ ಮುಖ್ಯ ಕಾರಣ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು. ಹೆಸರಾಂತ ನಿರ್ದೇಶಕ ಎಸ್ ನಾಗೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಹಾಗು ‘777 ಚಾರ್ಲಿ’ ಸಿನಿಮಾ ಖ್ಯಾತಿಯ ಸಂಗೀತ ಶೃಂಗೇರಿ ಅವರು ನಾಯಕ-ನಾಯಕಿಯಾಗಿ ನಟಿಸಿದ್ದಾರೆ.ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಈ ಸಿನಿಮಾ ಇದೇ ಆಗಸ್ಟ್ ಗೆ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಪ್ರಭುದೇವ ಅವರು ಕೂಡ ಅತಿಥಿ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

• ಮಿಸ್ಟರ್ ಬ್ಯಾಚುಲರ್
ಚಿತ್ರೀಕರಣವನ್ನು ಮುಗಿಸಿಕೊಂಡು ಬಿಡುಗಡೆಗೆ ಕಾಯುತ್ತಿರುವ ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಸಿನಿಮಾ ‘ಮಿಸ್ಟರ್ ಬ್ಯಾಚುಲರ್’. ಹೊಸ ನಿರ್ದೇಶಕರಾದ ನಾಯ್ಡು ಬಂದರ್ ಅವರ ಈ ಸಿನಿಮಾ ಜುಲೈ 15ಕ್ಕೆ ಬಿಡುಗಡೆಯಗೋ ಸಾಧ್ಯತೆಗಳಿವೆ. ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ನಿಮಿಕಾ ರತ್ನಾಕರ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

• ಲವ್ ಮಿ ಓರ್ ಹೇಟ್ ಮಿ
ಡಿಂಪಲ್ ಕ್ವೀನ್ ರಚಿತ ರಾಮ್ ಹಾಗು ಡಾರ್ಲಿಂಗ್ ಕೃಷ್ಣ ಅವರು ಜೋಡಿಯಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಲವ್ ಮಿ ಓರ್ ಹೇಟ್ ಮಿ’. ದೀಪಕ್ ಗಂಗಾಧರ್ ಅವರು ನಿರ್ದೇಶಸುತ್ತಿರುವ ಈ ಸಿನಿಮಾ ಹಾಸ್ಯಭರಿತ ಪ್ರೇಮಕತೆ ಆಗಿರಲಿದೆಯಂತೆ. ಸದ್ಯ ರಚಿತ ರಾಮ್ ಹಾಗು ಡಾರ್ಲಿಂಗ್ ಕೃಷ್ಣ ಇಬ್ಬರೂ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದರಿಂದ ಈ ಸಿನಿಮಾದ ಚಿತ್ರೀಕರಣ ಇನ್ನು ಆರಂಭವಾಗಿಲ್ಲ.

ಇವೆಲ್ಲದರುಗಳ ಜೊತೆಗೆ ಅವರ ಜನ್ಮದಿನದ ಸಲುವಾಗಿ ಹೊಸ ಸಿನಿಮಾದ ಘೋಷಣೆಯಾಗಿದೆ. ‘ಮುಂಗಾರು ಮಳೆ 2’ ಸಿನಿಮಾ ಖ್ಯಾತಿಯ ಯಶಸ್ವಿ ನಿರ್ದೇಶಕ ಶಶಾಂಕ್ ತಾಲ್ಯ ಅವರು ನಿರ್ದೇಶಿಸಿ ನಿರ್ಮಿಸುತ್ತಿರುವ ಹೊಸ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರು ನಾಯಕರಾಗಿ ನಟಿಸಲಿದ್ದಾರೆ. ಸಿನಿಮಾದ ಶೀರ್ಷಿಕೆಯನ್ನು ಇನ್ನು ನಿರ್ಧರಿಸಿಲ್ಲ. ಹೀಗೆ ಸಾಲುಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೃಷ್ಣ ಅವರು ಸಿನಿರಸಿಕರ ಮನದಲ್ಲಿ ‘ಲವ್ ಮೊಕ್ಟೇಲ್’ನ ಆದಿಯಾಗಿಯೇ ಉಳಿದುಹೋಗಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ಇವರು ಕನ್ನಡದ ಭರವಸೆಯ ಯುವ ನಟ-ನಿರ್ದೇಶಕರಾಗಿ ಬೇರೂರಿದ್ದಾರೆ.