- June 13, 2022
ವರ್ಷದಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆ ಕಂಡ ನಟ, ಡಾಲಿ ಧನಂಜಯ.


ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರೋ ಯುವನಟರ ಸಾಲಿನಲ್ಲಿ ಮೊದಲು ಬರುವವರು, ‘ನಟರಾಕ್ಷಸ’ ಡಾಲಿ ಧನಂಜಯ. ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಡಾಲಿ, ಹೀರೋಗೂ ಸೈ, ವಿಲನ್ ಗು ಸೈ. ಸದ್ಯ ಪುರ್ಸೊತ್ತೇ ಇಲ್ಲದಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಇವರು, ತಮ್ಮ ಸಾಲು ಸಾಲು ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅರ್ಧ ಮುಗಿದ ಈ 2022ನ್ನು ಮೇಲ್ನೋಟಕ್ಕೆ ಒಮ್ಮೆ ನೋಡಿದರೆ, ಈ ವರ್ಷದಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆ ಕಂಡಂತಹ ಕನ್ನಡದ ನಟ ಎನಿಸಿಕೊಳ್ಳುತ್ತಾರೆ ಡಾಲಿ.




2021ರ ವರ್ಷಾಂತ್ಯಕ್ಕೆ ತೆರೆಕಂಡ ಇವರ ‘ಬಡವ ರಾಸ್ಕಲ್’ ಅದ್ದೂರಿ ಯಶಸ್ಸು ಕಂಡಿತ್ತು. 2022ರ ಆರಂಭದ ಸುಮಾರು ಎರಡು ತಿಂಗಳುಗಳ ಕಾಲ ಎಲ್ಲೆಡೆ ಈ ಸಿನಿಮಾವೆ ಸದ್ದು ಮಾಡುತ್ತಿತ್ತು. ಇದಾದ ಮೇಲೆ ಮೇ 20ಕ್ಕೆ ‘ಟ್ವೆಂಟಿ ಒನ್ ಅವರ್ಸ್’ ಸಿನಿಮಾ ತೆರೆಕಂಡಿದ್ದು, ಒಂದು ಮಟ್ಟಿನ ಫಲಿತಾಂಶ ಪಡೆದಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ಡಾಲಿ ಮತ್ತೊಮ್ಮೆ ತೆರೆಮೇಲೆ ಬರಲಿರೋ ‘ಬೈರಾಗಿ’ ಸಿನಿಮಾ ಇದೆ ಜುಲೈ 1ಕ್ಕೆ ಬಿಡುಗಡೆಯಾಗಲಿದೆ. ಜೊತೆಗೆ ಧನಂಜಯ ಹಾಗು ರಚಿತ ರಾಮ್ ಜೋಡಿಯಾಗಿ ನಟಿಸಿರುವ ‘ಮಾನ್ಸೂನ್ ರಾಗ’ ಸಿನಿಮಾ ಆಗಸ್ಟ್ 12ಕ್ಕೆ ತೆರೆಕಾಣುವುದೆಂದು ಚಿತ್ರತಂಡ ಘೋಷಣೆ ಮಾಡಿದೆ. ಕುಶಾಲ್ ಗೌಡ ಅವರ ನಿರ್ದೇಶನದಲ್ಲಿ ಧನಂಜಯ ಹಾಗು ಅದಿತಿ ಪ್ರಭುದೇವ ಜೊತೆಯಾಗಿ ಬಣ್ಣ ಹಚ್ಚಿರುವ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ಸಿನಿಮಾ ತನ್ನ ತಾರಾಬಳಗದಿಂದ ಹಾಗು, ಪೋಸ್ಟರ್ ಗಳಿಂದ ನಿರೀಕ್ಷೆ ಹುಟ್ಟಿಸಿದ್ದು, ಸೆಪ್ಟೆಂಬರ್ 9ಕ್ಕೆ ಚಿತ್ರಮಂದಿರಕ್ಕೆ ಈ ಚಿತ್ರ ಲಗ್ಗೆ ಇಡಲಿದೆ.




ಇನ್ನು ಡಾಲಿಯವರೇ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ಡಾನ್ ಜಯರಾಜ್ ಅವರ ಜೀವನ ಚರಿತ್ರೆಯಾದ ‘ಹೆಡ್ ಬುಷ್’ ಸಿನಿಮಾ ಅಕ್ಟೋಬರ್ 21ರಂದು ಬಿಡುಗಡೆಗೊಳಿಸಲು ನಿರ್ಧರಿಸಿದೆ ಚಿತ್ರತಂಡ. ಈ ಚಿತ್ರದಲ್ಲಿ ಡಾಲಿ ಅವರ ಜೊತೆ, ಕ್ರೇಜಿ ಸ್ಟಾರ್ ರವಿಚಂದ್ರನ್, ಶ್ರುತಿ ಹರಿಹರನ್, ವಸಿಷ್ಟ ಸಿಂಹ, ಲೂಸ್ ಮಾದ ಯೋಗಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಹಾಗೆಯೇ ಡಾಲಿಯ 25ನೇ ಸಿನಿಮಾವಾಗಿರುವ, ‘ಕೆ ಆರ್ ಜಿ ಸ್ಟುಡಿಯೋಸ್’ ನಿರ್ಮಾಣದಲ್ಲಿ ಮೂಡಿಬರುತ್ತಿರುವ, ಡಾಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವ ‘ಹೊಯ್ಸಳ’ ಸಿನಿಮಾ ಈ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆ ಕಾಣುವ ಸಾಧ್ಯತೆಗಳಿವೆ. ಇದರ ನಡುವೆ ನವರಸ ನಾಯಕ ಜಗ್ಗೇಶ್ ಅವರ ಜೊತೆಗೆ ಡಾಲಿ ಅವರು ಬಣ್ಣ ಹಚ್ಚಿರುವ ‘ತೋತಾಪುರಿ’ ಸಿನಿಮಾ ಈ ವರ್ಷದಲ್ಲೇ ಎಂದಾದರೂ ಬಿಡುಗಡೆಯಾಗಬಹುದು.








ಹಾಗಾಗಿ 2022ರ ಉಳಿದ ವರ್ಷಾರ್ಧಕ್ಕೆ ತಿಂಗಳಿಗೊಂದು ಡಾಲಿ ಅವರ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಕಾಣಬಹುದು. ಒಂದಕ್ಕಿಂತ ಒಂದು, ವಿಭಿನ್ನ ಕಥೆಗಳಲ್ಲಿ ಹಾಗು ಪಾತ್ರಗಳಲ್ಲಿ ನಟಿಸುವ ಡಾಲಿ ಅವರ ಮುಂದಿನ ಸಿನಿಮಾಗಳ ಮೇಲೆ ಸಿನಿರಸಿಕರು ತಮ್ಮ ಆಸಕ್ತಿಯ ಕಣ್ಣುಗಳನ್ನು ನೆಟ್ಟಿದ್ದಾರೆ.








