- June 11, 2022
‘ಡಾನ್ ಜಯರಾಜ್’ ಅವರನ್ನ ಬಿಡುಗಡೆಗೊಳಿಸಲು ಹೊರಟ ಡಾಲಿ!!


ಡಾಲಿ ಧನಂಜಯ ಅವರು ಸದ್ಯ ಕನ್ನಡದಲ್ಲಿ ಅತ್ಯಂತ ಯಶಸ್ವಿ ಹಾಗು ಅತ್ಯಂತ ಬ್ಯುಸಿ ಆಗಿರುವ ನಟರುಗಳಲ್ಲಿ ಒಬ್ಬರು. ಸದ್ದಿಲ್ಲದೆ ಸಾಲು-ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಇವರು, ಬಿಡುಗಡೆಗೊಂಡ ತಮ್ಮ ಸಿನಿಮಾಗಳಲ್ಲಿ ಯಶಸ್ಸು ಕೂಡ ಕಾಣುತ್ತಿದ್ದಾರೆ. ಸದ್ಯ ಇವರ ಅಭಿನಯದ ಮತ್ತೊಂದು ಸಿನಿಮಾ ತೆರೆಮೇಲೆ ಬರಲು ಮುಹೂರ್ತ ಗೊತ್ತು ಮಾಡಿಕೊಂಡಿದೆ.


ಬೆಂಗಳೂರು ಅಂಡರ್ ವರ್ಲ್ಡ್ ನ ಮೊದಲ ದೊರೆ ‘ಎಂ ಪಿ ಜಯರಾಜ್’ ಅವರ ಬಗೆಗೆ ಎಲ್ಲರು ತಿಳಿದಿರುವವರೇ. ಅವರ ಜೀವನಗಾಥೆ ಇದೀಗ ಸಿನಿಮಾವಾಗಿ ಮೂಡಿಬರುತ್ತಿದೆ. ಲೇಖಕ ಅಗ್ನಿ ಶ್ರೀಧರ್ ಅವರು ಬರೆದಿರುವ ಡಾನ್ ಜಯರಾಜ್ ಅವರ ಆತ್ಮಕತೆ ಆದಂತಹ ‘ದಾದಾಗಿರಿಯ ದಿನಗಳು’ ಎಂಬ ಪುಸ್ತಕದಿಂದ ಈ ಸಿನಿಮಾ ಮಾಡಲಾಗಿದೆ ಎನ್ನಲಾಗುತ್ತಿದೆ. ಸ್ವತಃ ಅಗ್ನಿ ಶ್ರೀಧರ್ ಅವರು ಸಿನಿಮಾದ ಚಿತ್ರಕತೆಯ ಕೆಲಸಗಳಲ್ಲೂ ಕೈಜೋಡಿಸಿದ್ದಾರಂತೆ. ಶೂನ್ಯ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಈ ವರ್ಷದ ದೀಪಾವಳಿ ಹಬ್ಬಕ್ಕೆ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಲು ಬರುತ್ತಿದೆ. ಇದೇ ಅಕ್ಟೋಬರ್ 21ರಂದು ಸಿನಿಮಾ ಎಲ್ಲೆಡೆ ಬಿಡುಗಡೆಯಾಗಲಿದೆ. ‘ಕೆ ಆರ್ ಜಿ ಸ್ಟುಡಿಯೋಸ್’ ಸಿನಿಮಾದ ವಿತರಣೆಯ ಜವಾಬ್ದಾರಿ ಪಡೆದಿದೆ.




ಡಾನ್ ಜಯರಾಜ್ ಅವರ ಪಾತ್ರದಲ್ಲಿ ಡಾಲಿ ನಟಿಸುತ್ತಿದ್ದು, ‘ಸೋಮಣ್ಣ ಟಾಕೀಸ್’ ಅವರ ಜೊತೆ ಸೇರಿ ಸ್ವತಃ ಡಾಲಿ ಧನಂಜಯ್ ಅವರು ತಮ್ಮ ‘ಡಾಲಿ ಪಿಕ್ಚರ್ಸ್’ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶೃತಿ ಹರಿಹರನ್, ಪಾಯಲ್ ರಾಜ್ಪುತ್, ಲೂಸ್ ಮಾದ ಯೋಗಿ, ರಘು ಮುಖರ್ಜಿ, ವಸಿಷ್ಟ ಸಿಂಹ, ರವಿಚಂದ್ರನ್ ಮುಂತಾದ ಗಣ್ಯನಟರು ಕಥೆಯ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ‘ನಟರಾಕ್ಷಸ’ ಡಾಲಿಯನ್ನು ಜಯರಾಜ್ ಅವರ ಪಾತ್ರದಲ್ಲಿ ಕಾಣಲು ಕರುನಾಡು ಕಾತುರದಿಂದ ಕಾಯುತ್ತಿದೆ. ಸದ್ಯ ಚಿತ್ರತಂಡ ಹೊರಹಾಕಿರೋ ಬಿಡುಗಡೆ ದಿನಾಂಕದಿಂದಾಗಿ ಡಾಲಿ ಅಭಿಮಾನಿಗಳು ಅಕ್ಟೋಬರ್ 21ಕ್ಕೆ ಕಾಯುವ ಹಾಗಾಗಿದೆ.






