- July 5, 2022
ಮತ್ತೊಮ್ಮೆ ಪೊಲೀಸ್ ಆಫೀಸರ್ ಆಗಿ ಬರುತ್ತಿದ್ದಾರೆ ಡಾಲಿ.


ಸದ್ಯದ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ, ಸಕ್ರಿಯ ಹಾಗು ಬಹುಬೇಡಿಕೆಯ ನಟರಲ್ಲಿ ಬರುವ ಮೊದಲ ಹೆಸರು ಡಾಲಿ ಧನಂಜಯ. ನಾಯಕನಾದರೂ ಸರಿ, ಖಳನಾಯಕನಾದರೂ ಸರಿ ಪೋಷಕನಾದರೂ ಸರಿ ಪ್ರತಿಯೊಂದು ಪಾತ್ರಕ್ಕೂ ತಮ್ಮದೇ ರೀತಿಯಲ್ಲಿ ನ್ಯಾಯ ನೀಡುವ ನಟರಿವರು. ಈಗಾಗಲೇ ಈ ವರ್ಷದಲ್ಲಿ ಅತೀ ಹೆಚ್ಚು ಸಿನಿಮಾಗಳು ಬಿಡುಗಡೆ ಕಾಣುತ್ತಿರುವ ಕನ್ನಡದ ನಟ ಎನಿಸಿಕೊಂಡಿರುವ ಇವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. ಸದ್ಯ ಇವರ ಹೊಸ ಸಿನಿಮಾದಲ್ಲಿನ ಇವರ ಹೊಸ ಲುಕ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.




‘ಕೆ ಆರ್ ಜಿ ಸ್ಟುಡಿಯೋಸ್’ ಹಾಗು ಡಾಲಿ ಸೇರಿ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ‘ರತ್ನನ್ ಪ್ರಪಂಚ’ ಎಂಬ ರತ್ನವನ್ನೇ ನೀಡಿದ್ದಾರೆ. ಇದೀಗ ಡಾಲಿ ಹಾಗು ಕೆ ಆರ್ ಜಿ ಕಾಂಬಿನೇಶನ್ ನ ಎರಡನೇ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅದುವೇ ಡಾಲಿ ಧನಂಜಯ ಅವರ 25ನೇ ಸಿನಿಮಾವಾದ ‘ಹೊಯ್ಸಳ’. ವಿಜಯ್ ಎನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾದಲ್ಲಿ ಡಾಲಿ ಮತ್ತೊಮ್ಮೆ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಚಿತ್ರದಲ್ಲಿನ ಇವರ ಫರ್ಸ್ಟ್ ಲುಕ್ ಬಿಡುಗಡೆಯಾಗಿದ್ದು, ಮುಖದ ಮೇಲೆ ಒಂದಿಂಚೂ ಗಡ್ಡವಿಲ್ಲದೆ, ಶಿಸ್ತಿನ ಸಿಪಾಯಿಯಂತೆ ಕಾಣಿಸಿಕೊಂಡಿದ್ದಾರೆ. ಫೋಟೋ ಕಂಡವರಿಗೆ ಇದೊಂದು ಸೀರಿಯಸ್ ಪಾತ್ರ ಎಂಬ ಅಭಿಪ್ರಾಯ ಮೂಡುತ್ತದೆ. ಈ ಪಾತ್ರkke ಗುರುದೇವ್ ಹೊಯ್ಸಳ ಎಂದು ಹೆಸರಿಡಲಾಗಿದ್ದು, ಡಾಲಿ ಈ ಲುಕ್ ನಲ್ಲಿ ಖದರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.






ಹಲವು ಸಿನಿಮಾಗಳನ್ನು ಕನ್ನಡ ನಾಡಿಗೆ ವಿತರಣೆ ಮಾಡುತ್ತಿರೋ ‘ಕೆ ಆರ್ ಜಿ ಸ್ಟುಡಿಯೋಸ್’ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರೋ ಎರಡನೇ ಸಿನಿಮಾ ‘ಹೊಯ್ಸಳ’. ‘ರತ್ನನ್ ಪ್ರಪಂಚ’ದ ಮೂಲಕ ಎಲ್ಲರ ನಂಬಿಕೆ ಗಳಿಸಿದ್ದ ಈ ಜೋಡಿಯ ಮೇಲೆ ‘ಹೊಯ್ಸಳ’ದಲ್ಲಿ ಅದಕ್ಕೂ ಹೆಚ್ಚಿಗಿನ ನಿರೀಕ್ಷೆ ಇರಲಿದೆ. ವಿಜಯ್ ಎನ್ ರಚಿಸಿ ನಿರ್ದೇಶಿಸಿರುವ ಈ ಸಿನಿಮಾಗೆ ತಮನ್ ಎಸ್ ಅವರ ಸಂಗೀತವಿರಲಿದೆ. ಅಮೃತ ಅಯಂಗಾರ್ ಡಾಲಿಗೆ ನಾಯಕಿಯಾಗಿರಲಿದ್ದಾರೆ. ಈ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ಬಿಡುಗಡೆಯಾಗೋ ಎಲ್ಲಾ ಸಾಧ್ಯತೆಯಿದೆ.








