• June 14, 2022

‘777 ಚಾರ್ಲಿ’ ನೋಡಿ ಭಾವುಕರಾದ ಕನ್ನಡ ನಾಡಿನ ದೊರೆ.

‘777 ಚಾರ್ಲಿ’ ನೋಡಿ ಭಾವುಕರಾದ ಕನ್ನಡ ನಾಡಿನ ದೊರೆ.

ಪ್ರಾಯಷಃ ಸದ್ಯ ‘777 ಚಾರ್ಲಿ’ ಸಿನಿಮಾವನ್ನು ಹೊಗಳದೆ, ಸಿನಿಮಾ ನೋಡಿ ಕಣ್ಣ ತುಂಬಿಕೊಳ್ಳದೆ ಇರೋ ಸಿನಿರಸಿಕರೇ ಇಲ್ಲ ಎನ್ನಬಹುದು. ಅಷ್ಟರ ಮಟ್ಟಿಗೆ ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಎಲ್ಲರನ್ನೂ ಕಾಡುತ್ತಾ ಎಲ್ಲೆಡೆ ಹೆಸರು ಮಾಡುತ್ತಿದೆ. ಕಿರಣ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಒಬ್ಬ ವ್ಯಕ್ತಿ ಹಾಗು ನಾಯಿಯ ನಡುವಿನ ಅವಿನಾಭಾವ ಸಂಭಂದವನ್ನು, ಆ ನಾಯಿ ನೀಡೋ ಅಪಾರ ಪ್ರೀತಿಯನ್ನು ತೆರೆಮೇಲೆ ತೋರಿಸುತ್ತದೆ. ಸದ್ಯ ಸಿನಿಮಾ ನೋಡಿ ಭಾವುಕರಾದವರ ಸಾಲಿಗೆ ಕನ್ನಡನಾಡಿನ ದೊರೆ, ಮುಖ್ಯಮಂತ್ರಿ ಶ್ರೀ ಬಿ ಎಸ್ ಬೊಮ್ಮಾಯಿ ಅವರು ಕೂಡ ಸೇರಿಕೊಂಡಿದ್ದಾರೆ.

ಸ್ವತಃ ಶ್ವಾನಪ್ರೇಮಿಯಾದ ಮಾನ್ಯ ಮುಖ್ಯಮಂತ್ರಿಯವರು, ಚಿತ್ರತಂಡದ ಕೋರಿಕೆಯ ಮೇರೆಗೆ ಜೂನ್ 13ರಂದು ಬೆಂಗಳೂರಿನ ಒರಿಯನ್ ಮಾಲ್ ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಇವರ ಜೊತೆಗೆ ಸಚಿವರಾದ ಆರ್ ಅಶೋಕ್ ಹಾಗು ಬಿ ಸಿ ನಾಗೇಶ್ ಅವರು ಕೂಡ ಉಪಸ್ಥಿತರಿದ್ದು, ಮೂವರು ಕೂಡ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. “ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ನಾನು ಕೂಡ ಶ್ವಾನಪ್ರೇಮಿಯೇ. ನನ್ನ ಬಳಿ ಸನ್ನಿ ಎಂಬ ನಾಯಿಯೊಂದಿತ್ತು. ಕಳೆದ ವರ್ಷ ಆ ನಾಯಿ ತೀರಿಕೊಂಡಾಗ ಬಹಳ ಭಾವುಕನಾಗಿದ್ದೆ. ಈಗಲೂ ಕೂಡ ‘ದಿಯಾ’ ಎನ್ನುವ ನಾಯಿಯನ್ನು ಸಲಹುತ್ತಿದ್ದೇನೆ. ಅದು ಕೂಡ ಇದೆ ರೀತಿ ಮನೆಗೆ ಹೋದ ತಕ್ಷಣ ಅಪ್ಪಿಕೊಳ್ಳುತ್ತದೆ” ಎಂದು ಸಿನಿಮಾದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, “ಕೆಜಿಎಫ್ ಹಾಗು ಚಾರ್ಲಿ ಸಿನಿಮಾಗಳು ಪ್ರಪಂಚದಾದ್ಯಂತ ಸದ್ದು ಮಾಡುತ್ತಿವೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ನಮ್ಮ ಚಿತ್ರರಂಗದಿಂದ ಇನ್ನು ಅದ್ಭುತ ಸಿನಿಮಾಗಳು ಬರಲಿ” ಎಂದು ಆಶಿಸುತ್ತಾರೆ ಮುಖ್ಯಮಂತ್ರಿಗಳು.