• July 5, 2022

ಲಾಭದ ಸಂತಸವನ್ನು ‘ಹಂಚಿ’ಕೊಳ್ಳುತ್ತಿದೆ 777ಚಾರ್ಲಿ!!

ಲಾಭದ ಸಂತಸವನ್ನು ‘ಹಂಚಿ’ಕೊಳ್ಳುತ್ತಿದೆ 777ಚಾರ್ಲಿ!!

ಭಾರತದಾದ್ಯಂತ ಸಿನಿರಸಿಕರನ್ನ ಭಾವುಕಾರಾಗಿಸಿರುವ ಕೀರ್ತಿ ‘777 ಚಾರ್ಲಿ’ ಸಿನಿಮಾದ್ದು. ಜೂನ್ 10ರಂದು ಬಿಡುಗಡೆಗೊಂಡು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಈ ಸಿನಿಮಾ ನೋಡುಗರೆಲ್ಲರ ಮನಸೆಳೆದಿದೆ. ಅದರಿಂದಲೇ ಚಿತ್ರತಂಡ ಉತ್ತಮ ಲಾಭವನ್ನು ಪಡೆದುಕೊಂಡಿದೆ. 2022ರಲ್ಲಿ ‘ಜೇಮ್ಸ್’ ಹಾಗು ‘ಕೆಜಿಎಫ್ ಚಾಪ್ಟರ್ 2’ ನಂತರ 100 ಕೋಟಿ ಕ್ಲಬ್ ಸೇರಿಕೊಂಡ ಮೂರನೇ ಕನ್ನಡ ಎನಿಸಿಕೊಂಡಿರುವ ‘777 ಚಾರ್ಲಿ’, ತನ್ನ ಲಾಭಂಶದ ಬಗ್ಗೆ ಉತ್ತಮ ನಿರ್ಧಾರ ಹೊರಹಾಕಿದೆ.

ದೇಶದಾದ್ಯಂತ ಸುಮಾರು 450ಕ್ಕೂ ಹೆಚ್ಚು ಕಡೆಗಳಲ್ಲಿ ಯಶಸ್ವಿ 25 ದಿನಗಳನ್ನು ಪೂರೈಸಿರುವ ‘777 ಚಾರ್ಲಿ’ ಚಿತ್ರಮಂದಿರಗಳು ಹಾಗು ಡಿಜಿಟಲ್ ಹಕ್ಕುಗಳನ್ನು ಸೇರಿ ಸುಮಾರು 150ಕೋಟಿಯ ವ್ಯವಹಾರ ನಡೆಸಿದೆ ಎಂದು ಚಿತ್ರದ ನಿರ್ಮಾಪಕ ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಸದ್ಯ ತಾವು ಪಡೆದ ಲಾಭಾಂಶವನ್ನು ಹಂಚಿಕೊಳ್ಳುವುದರ ಬಗ್ಗೆಯೂ ಮಾತನಾಡಿದ್ದಾರೆ ರಕ್ಷಿತ್ ಶೆಟ್ಟಿ.

‘777 ಚಾರ್ಲಿ’ ಮೂರು ವರ್ಷಗಳ ಸತತ ಪರಿಶ್ರಮದ ಫಲ. ಇಂದು ಈ ಚಿತ್ರವನ್ನ ಜನರು ಕೊಂಡಾಡುತ್ತಿದ್ದಾರೆ, ಅದಕ್ಕೆ ಕಾರಣ ಮೂರು ವರ್ಷಗಳಿಂದ ಈ ಒಂದೇ ಸಿನಿಮಾದ ಮೇಲೆ ಕೆಲಸ ಮಾಡುತ್ತಿರುವ ಹಲವು ಸಿನಿಕರ್ಮಿಗಳು. ಹಾಗಾಗಿ ತಾವು ಪಡೆದ ಲಾಭದ 10% ಅನ್ನು ಸಿನಿಮಾಗಾಗಿ ಶ್ರಮಿಸಿರುವ ಚಿತ್ರತಂಡದ ಜೊತೆಗೆ ಹಂಚಿಕೊಳ್ಳುವ ನಿರ್ಧಾರ ಮಾಡಿದ್ದಾರೆ ನಿರ್ಮಾಪಕರು. ಅಲ್ಲದೇ ‘777 ಚಾರ್ಲಿ’ ಹೇಳುವುದು ಕೂಡ ಒಂದು ಮೂಕಪ್ರಾಣಿಯ ಬಗ್ಗೆ. ಹಾಗಾಗಿ ದೇಶದಾದ್ಯಂತ ಶ್ವಾನಗಳು ಹಾಗು ಮೂಕಪ್ರಾಣಿಗಳ ರಕ್ಷಣೆ ಹಾಗು ಪೋಷಣೆಗೆ ಮೂಡಿಪಾಗಿ ಕೆಲಸ ಮಾಡುತ್ತಿರುವ NGO ಗಳಿಗೆ ತಾವು ಪಡೆದ ಲಾಭದ 5% ಅನ್ನು ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ನಮ್ಮ ಚಿತ್ರಕ್ಕೆ ನೀವು ತೋರಿಸಿರೋ ಈ ಅಭಿಮಾನಕ್ಕೆ ಸದಾ ಚಿರಋಣಿ ಎಂದು ಬರೆದುಕೊಂಡು ತಮ್ಮ ‘ಪರಮ್ ವಾಹ್ ಸ್ಟುಡಿಯೋಸ್’ನ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ.