- June 10, 2022
ಮುಗ್ದತೆ ಮತ್ತು ಮಾನವೀಯತೆಯ ಪ್ರತಿಬಿಂಬ 777 ಚಾರ್ಲಿ


777 ಚಾರ್ಲಿ ದೇಶದಾದ್ಯಂತ ಬಿಡುಗಡೆಯಾಗಿದ್ದು ಮನೆ ಮನೆಯಲ್ಲೂ ಈಗ ಚಾರ್ಲಿದೆ ಮಾತು, ಅವಳದ್ದೇ ಕಥೆ. ಭಾವನೆಗಳು ಬರಿ ಮನುಷ್ಯರಿಗಲ್ಲ ನಾಯಿಗೂ ಇರುತ್ತೆ ಅನ್ನೋದನ್ನ ಚಾರ್ಲಿ ತನ್ನ ನಟನೆಯಲ್ಲೇ ಸಾಭೀತುಪಡಿಸಿದ್ದಾಳೆ . ಒಂದು ನಾಯಿಯನ್ನು ಕಥಾ ಪಾತ್ರವಾಗಿ ಇಟ್ಕೊಂಡು ಈ ರೀತಿಯಲ್ಲೂ ಸಿನೆಮಾ ಮಾಡಬಹುದು ಅನ್ನೋದನ್ನ ಕಿರಣರಾಜ್ ತೋರಿಸಿದ್ದಾರಂದ್ರೆ ತಪ್ಪಾಗಲಿಕಿಲ್ಲ. ನಾಯಿ ಮತ್ತು ಮನುಷ್ಯನ ನಡುವಿನ ಭಾವನೆಗಳ ಪಯಣವನ್ನು ನಿರ್ದೇಶಕ ಕಿರಣರಾಜ್ ಅವರು ಅದ್ಭುತವಾಗಿ ಹೃದಯಕ್ಕೆ ನಾಟುವಂತೆ ತೋರಿಸಿದ್ದಾರೆ.


ಈ ಜರ್ನಿ ಧರ್ಮ ಚಾರ್ಲಿದೇ ಆದ್ರೂ ಅವ್ರ ಪ್ರತಿ ಹೆಜ್ಜೆ , ಪ್ರತೀ ತಿರುವು ಪ್ರೇಕ್ಷಕರಾಗಿ ನಾವೇ ಅಲ್ಲಿದ್ದು ಕಂಡಂತಿತ್ತು.


ಚಿಕ್ಕ ವಯಸ್ಸಿನಲ್ಲೆ ತಂದೆ ತಾಯಿಯನ್ನ ಕಳೆದುಕೊಂಡು ಬಾಲ್ಯದಿಂದಲೇ ಒಬ್ಬಂಟಿಯಾಗಿ ಬೆಳೆದ ಧರ್ಮ ಅಶಿಸ್ತಿನ ಜೀವನವನ್ನ ರೂಡಿಸಿಕೊಂಡಿರುತ್ತಾನೆ. ಅವನ ವಿಚಿತ್ರ ಜೀವನಶೈಲಿ, ಬಾವನೆಗಳಿಗೆ ಜಾಗವೇ ಕೊಡದ ಅವನ ಮನಸ್ಸು, ಸಹುದ್ಯೋಗಿಗಳ ದ್ವೇಷ ಹಾಗೆ ಅಕ್ಕ ಪಕ್ಕದ ಮನೆ ಮಕ್ಕಳಿಗೆ ಹಿಟ್ಲರ್ ಅಂಕಲ್ ಎಂದೇ ಕರೆಸಲ್ಪಟ್ಟಿರುತ್ತಾನೆ. ಮನುಷ್ಯರನ್ನೇ ಕಂಡು ಕೆಂಡಕಾರುವ ಧರ್ಮನ ಜೀವನದಲ್ಲಿ ಒಂದು ಶ್ವಾನ ಎಂಟ್ರಿ ಕೊಟ್ಟಾಗ, ದುರಾದೃಷ್ಟ ಎಂದು ಪರಿಗಣಿಸಿದ ಆ ನಾಯಿಯನ್ನು ಹೇಗೆ ಹತ್ತಿರಕ್ಕೆ ಹಚ್ಚಿಕೊಳ್ಳುತ್ತಾನೆ, ನೀವು ಅದೃಷ್ಟವಂತರಾಗಿದ್ರೆ ಮಾತ್ರ ಚಾರ್ಲಿ ನಿಮ್ಮ ಜೀವನದಲ್ಲಿ ಸಿಗುತ್ತಾಳೆ ಎನ್ನುವಷ್ಟು ಹೇಗೆ ಬದಲಾಗುತ್ತಾನೆ, ಹೇಗೆ ಚಾರ್ಲಿ ತನ್ನ ಮುಗ್ದತೆಯಿಂದ ಧರ್ಮನ ನಿರಾಸೆ ಜೀವನವನ್ನ ಸ್ವಾರಸ್ಯಕರವಾದ ಜೀವನಕ್ಕೆ ಬದಲಾಯಿಸ್ತಾನೆ ಅನ್ನೋದೇ ಈ ಸಿನಿಮಾದ ಸಾರಾಂಶ.


ಚಾರ್ಲಿಯ ನಟನೆಯೇ ಈ ಸಿನೆಮಾದ ಹೈಲೈಟ್. ಕೆಲವೇ ಪಾತ್ರಗಳನ್ನಿಟ್ಟು , ಐಟಂ ಸಾಂಗ್ಸ್ ಆಕ್ಷನ್ ಫೈಟ್ ಇಲ್ಲದೆ , ಬರೀ ಕಂಟೆಂಟ್ ಮೂಲಕವೇ ಇಷ್ಟು ನೀಟ್ ಆಗಿ ಸಿನಿಮಾ ಮಾಡ್ಬೌದು ಅನ್ನೋದಕ್ಕೆ 777 ಚಾರ್ಲಿ ಅದ್ಭುತವಾದ ಉದಾಹರಣೆ. ಧರ್ಮನ ಪಾತ್ರಕ್ಕೆ ರಕ್ಷಿತ್ ಶೆಟ್ಟಿ ಜೀವ ತುಂಬಿದ್ದಾರೆ. ನಾಯಕಿ ಸಂಗೀತ ಶೃಂಗೇರಿ ಅರ್ಥಮಯ ಪಾತ್ರದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಹಸನ್ಮುಖಿ ರಾಜ್ ಬಿ ಶೆಟ್ಟಿ ಎಂದಿನಂತೆ ಇಲ್ಲೂ ಕೂಡ ತಮ್ಮ ಹಾಸ್ಯದಿಂದ ಪಶುವಯ್ದ್ಯರ ಪಾತ್ರವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ .


ಒಟ್ಟ್ನಲ್ಲಿ 777 ಚಾರ್ಲಿ ಸಿನಿಮಾ ಪ್ರೇಕ್ಶಕರನ್ನು ನಗಿಸಿ , ಅಳಸಿ, ಕೊನೆಗೆ ವಾವ್ ಎಂದು ಹೇಳುವಂತೆ ಮಾಡುತ್ತೆ ಅನ್ನೋದ್ರಲ್ಲಿ ಡೌಟ್ ಯೆ ಇಲ್ಲ.




