- June 8, 2022
ಮಚ್ಚೆ ಗೌಡ ಪಕ್ಕಾ ಮನರಂಜನೆ ನೀಡುವ ಪಾತ್ರ – ಚಂದನ್ ಆಚಾರ್


ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿರಂಗದಲ್ಲಿ ನಟನಾ ಛಾಪು ಮೂಡಿಸಿರುವ ಚಂದನ್ ಆಚಾರ್ ರಂಗಭೂಮಿಯ ಮೂಲಕ ನಟನಾ ನಂಟು ಬೆಳೆಸಿಕೊಂಡ ಹುಡುಗ. ಕಿರಿಕ್ ಪಾರ್ಟಿಯಲ್ಲಿ ನಾಯಕ ರಕ್ಷಿತ್ ಶೆಟ್ಟಿ ಸ್ನೇಹಿತ ಆಗಿ ಕಾಣಿಸಿಕೊಂಡಿದ್ದ ಚಂದನ್ ಆಚಾರ್ ಆ ಪಾತ್ರದ ಮೂಲಕ ಕರುನಾಡಿನಾದ್ಯಂತ ಮನೆ ಮಾತಾದರು.


ಮುಂದೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಗುಳುನಗೆಯಲ್ಲಿಯೂ ನಾಯಕನ ಸ್ನೇಹಿತ ಆಗಿ ನಟಿಸಿರುವ ಚಂದನ್ ಆಚಾರ್ ಪೋಷಕ ಪಾತ್ರದ ಮೂಲಕ ಮನೆ ಮಾತಾದರು. ಮುಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ಮೂಲಕ ನಾಯಕ ಆಗಿ ಭಡ್ತಿ ಪಡೆದ ಚಂದನ್ ಆಚಾರ್ ಮಂಗಳವಾರ ರಜಾದಿನ ಸಿನಿಮಾದಲ್ಲಿ ನಾಯಕನಾಗಿ ಕಮಾಲ್ ಮಾಡಿದ್ದಾರೆ.


ಇದೀಗ ಬೆಂಗಳೂರು ಬಾಯ್ಸ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ಸಿನಿಪ್ರಿಯರನ್ನು ರಂಜಿಸಲಿದ್ದಾರೆ ಚಂದನ್ ಆಚಾರ್. ಈ ಸಿನಿಮಾದಲ್ಲಿ ಮಂಚೇಗೌಡ ಆಗಿ ಅಭಿನಯಿಸಿದ್ದು ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು. ಚಂದನ್ ಆಚಾರ್ ಅವರ ಈ ಹೊಸ ಅವತಾರ ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ.




“ಮಂಚೇಗೌಡ ಪಾತ್ರದ ಬಗ್ಗೆ ಹೇಳಬೇಕೆಂದರೆ ಇದು ಒಂದು ರೀತಿಯ ಮನರಂಜನೆ ನೀಡುವ ಪಾತ್ರ ಹೌದು. ನನ್ನ ಪಾತ್ರಕ್ಕೆ ಕರ್ಮಷಿಯಲ್ ಆ್ಯಂಗಲ್ ಗಳು ಕೂಡಾ ಇದೆ. ಎಲ್ಲಾ ರೀತಿಯಿಂದಲೂ ಇದು ನನಗೆ ಹೊಸ ಅನುಭವ. ಈಗಾಗಲೇ ನನ್ನ ಪಾತ್ರದ ಪೋಸ್ಟರ್ ರಿಲೀಸ್ ಆಗಿದೆ. ಉಳಿದವರ ಪಾತ್ರಗಳನ್ನು ಇದೇ ರೀತಿ ಲಾಂಚ್ ಮಾಡಲು ಚಿತ್ರತಂಡ ಯೋಚಿಸಿದೆ” ಎಂದು ಹೇಳುತ್ತಾರೆ ಚಂದನ್ ಆಚಾರ್.




ಇನ್ನು “ಬೆಂಗಳೂರಿಗೆ ಬಂದ ನಾಲ್ಕು ಜನ ಯುವಕರು ತಮ್ಮ ಜೀವನ ನಿರ್ವಹಣೆಗಾಗಿ ಸ್ಟಾಟರ್ಪ್ ಕಂಪನಿಯೊಂದನ್ನು ಶುರು ಮಾಡುವ ನಿರ್ಧಾರ ಮಾಡುತ್ತಾರೆ. ಅವರು ಜೀವನ ನಿರ್ವಹಣೆ ಹೇಗೆ ಮಾಡುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ” ಎಂದು ಸಿನಿಮಾದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡುತ್ತಾರೆ ಚಂದನ್ ಆಚಾರ್.






