• July 31, 2022

ಸೆಟ್ಟೇರುತ್ತಿದೆ ಚಾಲೆಂಜಿಂಗ್ ಸ್ಟಾರ್ ನ ಮುಂದಿನ ಸಿನಿಮಾ.

ಸೆಟ್ಟೇರುತ್ತಿದೆ ಚಾಲೆಂಜಿಂಗ್ ಸ್ಟಾರ್ ನ ಮುಂದಿನ ಸಿನಿಮಾ.

ಹಲವಾರು ಕನ್ನಡಿಗರ ನೆಚ್ಚಿನ ನಟ, ಆರಾಧ್ಯದೈವದಂತಿರುವ, ಅಪಾರ ಅಭಿಮಾನಿಗಳ ಸರದಾರ ‘ಡಿ ಬಾಸ್’ ದರ್ಶನ್ ಅವರು. ಇವರ ಸಿನಿಮಾ ಎಂದರೆ ಕನ್ನಡ ನಾಡಿನಲ್ಲೆಲ್ಲ ಹಬ್ಬದಂತೆ. ಇಂತಹ ನಾಯಕನಟರ ಮುಂದಿನ ಸಿನಿಮಾ ಸೆಟ್ಟೇರಲು ಸಿದ್ದವಾಗಿ ನಿಂತಿದೆ. ಸದ್ಯ ‘ಕ್ರಾಂತಿ’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಡಿ ಬಾಸ್ ಅವರ ಮುಂದಿನ ಸಿನಿಮಾದ ಮುಹೂರ್ತಕ್ಕೆ ದಿನಾಂಕ ಗೊತ್ತಾಗಿದೆ.

ಸದ್ಯ ಸುದ್ದಿಯಲ್ಲಿರುವ ಈ ಸಿನಿಮಾ ಬೇರಾವುದು ಅಲ್ಲದೇ ಎಲ್ಲೆಡೆ ಬಹುನಿರೀಕ್ಷೆ ಹುಟ್ಟಿಸಿರುವ ತರುಣ್ ಸುಧೀರ್ ಹಾಗು ದರ್ಶನ್ ಮತ್ತೊಮ್ಮೆ ಜೊತೆಯಾಗುತ್ತಿರುವ ಸಿನಿಮಾ. ಈಗಾಗಲೇ ‘ರಾಬರ್ಟ್’ ಸಿನಿಮಾದಿಂದ ಅತೀವ ಯಶಸ್ಸು ಕಂಡಿರುವ ಈ ಇಬ್ಬರು ಮತ್ತೊಮ್ಮೆ ಜೊತೆಯಾಗಿ ಸಿನಿಮಾ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿರುವುದೇ. ದರ್ಶನ್ ಅವರ 56ನೇ ಚಿತ್ರ ಇದಾಗಿದ್ದು, ತಾತ್ಕಾಲಿಕವಾಗಿ ‘ಡಿ56(D56)’ ಎಂದು ಚಿತ್ರವನ್ನ ಕರೆಯಲಾಗುತ್ತಿದೆ. ಇದೇ ಆಗಸ್ಟ್ 5ನೇ ತಾರೀಕು ವರಮಹಾಲಕ್ಷ್ಮಿ ಹಬ್ಬದ ದಿನದಂದು ಇನ್ನೂ ಹೆಸರಿಡದ ‘D56’ ಚಿತ್ರದ ಮುಹೂರ್ತ ನಡೆಸುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ.

ತರುಣ್ ಸುಧೀರ್ ಅವರು ಈಗಾಗಲೇ ದರ್ಶನ್ ಅವರಿಗೆ ‘ರಾಬರ್ಟ್’ ಸಿನಿಮಾ ನಿರ್ದೇಶನ ಮಾಡಿದ್ದರಿಂದ, ಈ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚೇ ಇದೆ. ಚಿತ್ರದ ‘ಕಾನ್ಸೆಪ್ಟ್ ಪೋಸ್ಟರ್’ ಒಂದನ್ನು ಬಹಳ ಹಿಂದೆಯೇ ಬಿಡುಗಡೆ ಮಾಡಿದ್ದು, ಅದರಲ್ಲಿ “ಹಿಂದಿರೋವ್ರಿಗೆ ದಾರಿ, ಮುಂದಿರೋನದ್ದು ಜವಾಬ್ದಾರಿ” ಹಾಗೆಯೇ ಕೆಳಗೆ ‘ನೈಜ ಘಟನೆ ಆಧರಿತ’ ಎಂದು ಬರೆಯಲಾಗಿತ್ತು. ಹಾಗಾಗಿ ಸಿನಿಮಾ ಕೊಂಚ ವಿಭಿನ್ನವಾಗಿರುವ ನಿರೀಕ್ಷೆಯಲ್ಲಿ ಪ್ರೇಕ್ಷಕರಿದ್ದಾರೆ. ರಾಕ್ ಲೈನ್ ವೆಂಕಟೇಶ್ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸದ್ಯ ದರ್ಶನ್ ಅವರು ‘ಕ್ರಾಂತಿ’ ಚಿತ್ರದ ಡಬ್ಬಿಂಗ್ ನಲ್ಲಿ ಬ್ಯುಸಿಯಾಗಿದ್ದು ಆದಷ್ಟು ಬೇಗನೆ ‘D56’ನ ಚಿತ್ರೀಕರಣ ಆರಂಭವಾಗಲಿದೆ.