• March 11, 2022

ಪರಭಾಷೆಯ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಚೈತ್ರಾ

ಪರಭಾಷೆಯ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಚೈತ್ರಾ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಯನಾತಾರ ಧಾರಾವಾಹಿಯ ನಯನಾ ಆಗಿ ಕನ್ನಡ ಕಿರುತೆರೆಗೆ ಕಾಲಿಟ್ಟು ವೀಕ್ಷಕರನ್ನು ರಂಜಿಸುತ್ತಿರುವ ಈಕೆಯ ಹೆಸರು ಚೈತ್ರಾ ಸಕ್ಕರಿ. ನಯನಾ ಆಗಿ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಚೈತ್ರಾ ಅವರಿಗೆ ಕನ್ನಡ ಕಿರುತೆರೆ ಹೊಸತು ಹೊರತು ಕಿರುತೆರೆಯಲ್ಲ! ಯಾಕೆಂದರೆ ಚೈತ್ರಾ ಅವರ ನಟನಾ ಪಯಣ ಶುರುವಾಗಿದ್ದು ತಮಿಳಿನಿಂದ‌

ತಮಿಳ್ ಸೆಲ್ವಿ ಧಾರಾವಾಹಿಯ ಮೂಲಕ ನಟನಾ ರಂಗಕ್ಕೆ ಪಾದದ ಮಾಡಿದ ಚೈತ್ರಾ ಅವರ ಕಿರುತೆರೆ ಪಯಣ ಶುರುವಾಗಿದ್ದು ರಿಯಾಲಿಟಿ ಶೋವಿನಿಂದ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋ ಕುಣಿಯೋಣು ಬಾರಾ ದ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚೈತ್ರಾ ಮುಂದೆ ತೆಲುಗು ಕಿರುತೆರೆಯ ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ ಕಮಾಲ್ ಮಾಡಿದರು‌.

ತದ ನಂತರ ನಟನೆಯತ್ತ ಮನಸ್ಸು ವಾಲಿದ ಕಾರಣ ತಮಿಳು ಧಾರಾವಾಹಿಯಲ್ಲಿ ನಟಿಸಲು ಅಸ್ತು ಎಂದರು. “ಡ್ಯಾನ್ಸ್ ನಲ್ಲಿ ಅಭಿನಯಕ್ಕೆ ಒತ್ತು ಜಾಸ್ತಿ. ಅಭಿನಯ ಇಲ್ಲ ಎಂದಾದರೆ ಡ್ಯಾನ್ಸ್ ಮಾಡಲು ಅಸಾಧ್ಯ. ಡ್ಯಾನ್ಸ್ ಮಾಡುತ್ತಲೇ ನನಗೆ ನಟನೆಯತ್ತ ಆಸಕ್ತಿ ಮೂಡಿತು. ನಟಿಯಾಗುವ ಆಸೆ ಉಂಟಾಯಿತು” ಎಂದು ಹೇಳುವ ಚೈತ್ರಾ ಕನ್ನಡ ಕಿರುತೆರೆಗೆ ಕಾಲಿಡಲು ಸೋಶಿಯಲ್ ಮೀಡಿಯಾ ಕಾರಣವೂ ಹೌದು.

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದ ಚೈತ್ರಾ ಸಕ್ಕರಿ ಹೆಚ್ಚಾಗಿ ಟಿಕ್ ಟಾಕ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಆ ಟಿಕ್ ಟಾಕ್ ವಿಡಿಯೋ ನೋಡಿದ ನಯನಾತಾರಾ ಧಾರಾವಾಹಿ ನಿರ್ದೇಶಕ ತಿಲಕ್ ಅವರು ಚೈತ್ರಾ ಗೆ ನಟಿಸುವ ಅವಕಾಶ ನೀಡಿದರು. ಒಲ್ಲೆ ಎನ್ನದ ಆಕೆ ನಯನಾ ಆಗಿ ಬದಲಾದರು.

ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಚೈತ್ರಾ ಅವರು ಇದೀಗ ಮಗದೊಂದು ಸಿಹಿ ಸುದ್ದಿ ನೀಡಿದ್ದಾರೆ. ಅದೇನೆಂದರೆ ಶೀಘ್ರದಲ್ಲಿ ಅವರು ತೆಲುಗು ಕಿರುತೆರೆಗೂ ಕಾಲಿಡಲಿದ್ದಾರೆ. ಜೀ ತೆಲುಗು ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ದೇವತಲಾರ ದೇವಿಚಂಡಿ ಯಲ್ಲಿ ನಾಯಕಿಯಾಗಿ ಚೈತ್ರಾ ನಟಿಸಲಿದ್ದಾರೆ‌. ಆ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿರುವ ಚೈತ್ರಾ ಅವರಿಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್ ‌