• April 15, 2022

ಕಿರುತೆರೆಗೆ ಸೆಂಚುರಿ ಸ್ಟಾರ್

ಕಿರುತೆರೆಗೆ ಸೆಂಚುರಿ ಸ್ಟಾರ್

ಸೆಂಚುರಿ ಸ್ಟಾರ್ ಬಿರುದಾಂಕಿತ ನಟ ಶಿವರಾಜ್ ಕುಮಾರ್ ದೊಡ್ಡ ಗ್ಯಾಪ್ ನ ನಂತರ ಕಿರುತೆರೆಗೆ ಮರಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಹೊಸ ಸೀಸನ್ ಇದೇ ಶನಿವಾರ ಶುರುವಾಗಲಿದ್ದು ಅದರಲ್ಲಿ ತೀರ್ಪುಗಾರರಾಗಿ ಶಿವರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ “ಕಿಕ್ ” ಎಂಬ ಡ್ಯಾನ್ಸಿಂಗ್ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಶಿವರಾಜ್ ಕುಮಾರ್ “ನಾನು ಇಷ್ಟು ವರ್ಷಗಳಲ್ಲಿ ನಟನೆಯ ಕಾರಣದಿಂದಾಗಿ ಪೂರ್ಣ ಪ್ರಮಾಣದ ತೀರ್ಪುಗಾರನಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಲಕ ಮತ್ತೆ ಕಿರುತೆರೆಗೆ ಮರಳಿರುವುದು ಖುಷಿ ತಂದಿದೆ” ಎನ್ನುತ್ತಾರೆ ಶಿವರಾಜ್ ಕುಮಾರ್.

ಇನ್ನು ಡ್ಯಾನ್ಸ್ ಶೋ ಬಗ್ಗೆ ಮಾತನಾಡಿರುವ “ಈ ಶೋ ಹಲವು ಬೆಳೆಯುವ ಡ್ಯಾನ್ಸರ್ಸ್ ಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ಇದರಿಂದ ಅವರಿಗೆ ಖ್ಯಾತಿ ಸಿಕ್ಕಿ ಅವರ ಬದುಕು ಬದಲಾಗುತ್ತದೆ. ವೈಯಕ್ತಿಕವಾಗಿ ನನಗೆ ಡ್ಯಾನ್ಸ್ ಇಷ್ಟ. ವಿವಿಧ ಹಿನ್ನೆಲೆಯ ಸ್ಪರ್ಧಿಗಳ ಜೊತೆ ಮಾತನಾಡಲು ನೋಡುತ್ತಿದ್ದೇನೆ” ಎಂದಿದ್ದಾರೆ.

ಇನ್ನು ಇದೇ ವಾರಾಂತ್ಯದಿಂದ ಆರಂಭವಾಗಲಿರುವ ಈ ಶೋವಿನಲ್ಲಿ ಇವರೊಂದಿಗೆ ಚಿನ್ನಿ ಪ್ರಕಾಶ್, ರಕ್ಷಿತಾ ಪ್ರೇಮ್ ಹಾಗೂ ಅರ್ಜುನ್ ಜನ್ಯ ಕೂಡಾ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಮೂಲಿಯಂತೆ ಮಾತಿನಮಲ್ಲಿ ಅನುಶ್ರೀ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.