- July 5, 2022
ಹೊಸ ರೂಪದಲ್ಲಿ ಬರುತ್ತಿದೆ ಈ ರಿಯಾಲಿಟಿ ಶೋ


ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’. ‘ಬಾದ್ ಷಾಹ್’ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಈ ಕಾರ್ಯಕ್ರಮ ಬಹುಪಾಲು ಕನ್ನಡಿಗರ ಅಚ್ಚುಮೆಚ್ಚು. ಈಗಾಗಲೇ 8 ಆವೃತ್ತಿಯನ್ನು ಮುಗಿಸಿಕೊಂಡಿರುವ ‘ಬಿಗ್ ಬಾಸ್’ ಇದೀಗ ಒಂಬತ್ತನೇ ಆವೃತ್ತಿಗೆ ಸಿದ್ದವಾಗುತ್ತಿದೆ. ಈ ಬಾರಿ ‘ಬಿಗ್ ಬಾಸ್’ ಹಲವು ಹೊಸ ಲಕ್ಷಣಗಳನಿಟ್ಟುಕೊಂಡು ಸೆಟ್ಟೇರುತ್ತಿದೆ.


ಮಾಮೂಲಿಯಾಗಿ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ‘ಬಿಗ್ ಬಾಸ್’ ಈವರೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿತ್ತು ಆದರೆ ಈ ಬಾರಿ 9ನೇ ಸೀಸನ್ ಆರಂಭಕ್ಕೂ ಮುನ್ನವೇ ‘ಮಿನಿ ಸೀಸನ್’ ಒಂದನ್ನು ಆರಂಭಿಸಲು ತಂಡ ನಿರ್ಧರಿಸಿದೆ. ಈ ಹಿಂದೆಯೂ ಈ ಪ್ರಯತ್ನ ಮಾಡಲಾಗಿತ್ತು. ಇಂಟರ್ನೆಟ್ ನ ಸ್ಟಾರ್ ಗಳೂ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿ ಪ್ರಸಿದ್ದರಾಗಿರುವ ಸಣ್ಣ ಪುಟ್ಟ ಸೆಲೆಬ್ರಿಟಿ ಗಳನ್ನೂ ಸೇರಿಸಿಕೊಂಡು ‘ಬಿಗ್ ಬಾಸ್ ಮಿನಿ ಸೀಸನ್’ ಮಾಡಲಾಗುತ್ತದೆ. ‘ವೂಟ್’ ಆಪ್ ನಲ್ಲಿ ಪ್ರಸಾರಗೊಳ್ಳಲಿರುವ ಈ ಚಿಕ್ಕ ಆವೃತ್ತಿ ಸುಮಾರು 42ದಿನ ಅಥವಾ 7 ವಾರಗಳ ಕಾಲ ಪ್ರಸಾರವಾಗಲಿದೆ.


ಕೇವಲ ‘ವೂಟ್ ಆಪ್’ನಲ್ಲಿ ಮಾತ್ರ ಈ ‘ಬಿಗ್ ಬಾಸ್ ಮಿನಿ ಸೀಸನ್’ ನೋಡಲು ಸಿಗಲಿದ್ದು, ವಾಹಿನಿಯಲ್ಲಿ ಪ್ರದರ್ಶನಗುವುದಿಲ್ಲ. ಇದೇ ಆಗಸ್ಟ್ ಆರಂಭಕ್ಕೆ ಈ ಹೊಸ ಪ್ರಯತ್ನ ಪರದೆ ಮೇಲೆ ಬರೋ ಸಾಧ್ಯತೆಯಿದೆ. ಎಂದಿನಂತೆಯೇ ಕಿಚ್ಚ ಸುದೀಪ್ ಅವರೇ ವಾರಾಂತ್ಯದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.


‘ಮಿನಿ ಸೀಸನ್’ ಮುಗಿದ ನಂತರ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪೂರ್ಣ ಪ್ರಮಾಣದ ‘ಬಿಗ್ ಬಾಸ್’ 9ನೇ ಆವೃತ್ತಿ ಆರಂಭವಾಗಲಿದೆ. ಸುಮಾರು 90 ದಿನಗಳ ಕಾಲ ನಡೆಯಲಿರೋ ಈ ಕಾರ್ಯಕ್ರಮದ ಸ್ಪರ್ಧಿಗಳು ಯಾರ್ಯಾರೆಂದು ಇನ್ನಷ್ಟೇ ತಿಳಿಸಬೇಕಿದೆ. ವಿಶೇಷವೆಂದರೆ, ‘ಮಿನಿ ಸೀಸನ್’ನಲ್ಲಿ ಭಾಗವಹಿಸಿರುವ ಸ್ಪರ್ದಿಗಳಲ್ಲಿ ಇಬ್ಬರನ್ನು ಮೇನ್ ಸೀಸನ್ ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.


ಇಷ್ಟೆಲ್ಲಾ ಅಂಶಗಳನ್ನೊಳಗೊಂಡ ಈ ಬಾರಿಯ ‘ಬಿಗ್ ಬಾಸ್’ ಕೊಂಚ ವಿಶೇಷವಾಗಿಯೇ ಇರಲಿದೆ. “ಪರಮ್ ಈ ಬಾರಿ ಬಿಗ್ ಬಾಸ್ ವೇದಿಕೆಗೆ ಹಲವು ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೊಸ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ‘ಬಿಗ್ ಬಾಸ್’ ಸೆಟ್ ಸೇರಲು ನಾನಂತೂ ಕಾಯುತ್ತಿದ್ದೇನೆ’ ಎಂದಿದ್ದಾರೆ ಕಾರ್ಯಕ್ರಮದ ರೂವಾರಿ ಕಿಚ್ಚ ಸುದೀಪ್.




