- June 27, 2022
ವಿಕ್ರಾಂತ್ ರೋಣ ಮೆಚ್ಚಿದ ಬಿಗ್ ಬಿ ಹೇಳಿದ್ದೇನು ಗೊತ್ತಾ?


ಅಭಿನಯ ಚಕ್ರವರ್ತಿ ಎಂದೇ ಚಂದನವನದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ವಿಕ್ರಾಂತ್ ರೋಣದ ಬಿಡುಗಡೆಗೆ ಇಡೀ ಜನತೆ ಕಾತರದಿಂದ ಕಾಯುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾದ ಸಾಲಿಗೆ ಸೇರಿರುವ ವಿಕ್ರಾಂತ್ ರೋಣದ ಟ್ರೇಲರ್ ಕೂಡಾ ಬಿಡುಗಡೆಯಾಗಿದ್ದು ಸಿನಿ ಪ್ರಿಯರು ಅದರಲ್ಲೂ ಕಿಚ್ಚ ಅಭಿಮಾನಿಗಳು ಫಿದಾ ಆಗಿದ್ದರು. ಇನ್ನು ಈ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಎಲ್ಲಾ ಭಾಷೆಯ ಟ್ರೇಲರ್ ಗೆ ಅತ್ಯದ್ಭುತವಾದ ಪ್ರತಿಕ್ರಿಯೆ ದೊರಕಿದೆ.


ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಎಲ್ಲರೂ ಕೂಡಾ ವಿಕ್ರಾಂತ್ ರೋಣನನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ ಕೊಂಡಾಡಿದ್ದಾರೆ. ಇದೀಗ ಬಿಗ್ ಬಿ ಸರದಿ. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣದ ಟ್ರೇಲರ್ ನೋಡಿರುವ ಬಿಗ್ ಬಿ ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ಹೌದು, ವಿಕ್ರಾಂತ್ ರೋಣ ಸಿನಿಮಾದ ಟ್ರೇಲರ್ ಹಂಚಿಕೊಂಡಿರುವ ಬಿಗ್ ಬಿ ಅಮಿತಾಬ್ ಬಚ್ಚನ್ “ಕನ್ನಡದ ಸ್ಟಾರ್ ನಟ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ 3ಡಿ ಸಿನಿಮಾ 5 ಭಾಷೆಯಲ್ಲಿ ತೆರೆಗೆ ಬರುತ್ತಿದೆ’ ಎಂದು ಅವರು ಬರೆದುಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರು ಸಾಮಾಜಿಕ ಜಾಲತಾಣದಲ್ಲಿ ಕೊಂಚ ಮಟ್ಟಿಗೆ ಆ್ಯಕ್ಟೀವ್ ಆಗಿದ್ದರೂ ಬೇರೆ ಭಾಷೆಯ ಸಿನಿಮಾಗಳ ಟ್ರೇಲರ್ ಹಂಚಿಕೊಳ್ಳುವುದು ಕಡಿಮೆಯೇ. ಇದೀಗ ಅವರು ವಿಕ್ರಾಂತ್ ರೋಣ ಕ್ಕೆ ಬೆಂಬಲ ನೀಡಿರುವುದು ಸುದೀಪ್ ಅಭಿಮಾನಿಗಳ ಜೊತೆಗೆ ಸಿನಿಪ್ರಿಯರಿಗೂ ಸಂತಸ ತಂದಿದೆ.












