• May 12, 2022

ದ್ವಿಪಾತ್ರದಲ್ಲಿ ಭಾವನಾ ಮೆನನ್

ದ್ವಿಪಾತ್ರದಲ್ಲಿ ಭಾವನಾ ಮೆನನ್

ಜಾಕಿ ಸಿನಿಮಾದ ಮೂಲಕ ಚಂದನವನದಲ್ಲಿ ಫೇಮಸ್ಸು ಆದ ಭಾವನಾ ಕೊಂಚ ಗ್ಯಾಪ್ ನ ನಂತರ ಮತ್ತೆ ನಟನೆಯತ್ತ ಮರಳಿರುವುದು ಸಿನಿ ಪ್ರಿಯರಿಗೆ ಹೊಸ ವಿಚಾರವೇನಲ್ಲ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ – 2 ರಲ್ಲಿ ನಟಿಸಿರುವ ಈಕೆ ಈಗ ಮಗದೊಂದು ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಆ ಸಿನಿಮಾದಲ್ಲಿ ಭಾವನಾ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದಿಗಂತ್ ಆಲಿಯಾಸ್ ರಕ್ಷಣ್ ನಿರ್ದೇಶನದ “ಪಿಂಕ್ ನೋಟು” ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಭಾವನಾ ಮೆನನ್ ಅಭಿನಯಿಸಲಿದ್ದು ಮಧ್ಯಮ ವರ್ಗದ ಕುಟುಂಬದ ಅಕ್ಕ ತಂಗಿಯಾಗಿ ಮೋಡಿ ಮಾಡಲಿದ್ದಾರೆ.
ಮನುಷ್ಯ ಕೇವಲ ದುಡ್ಡಿನ ಹಿಂದೆ ಬಿದ್ದಾಗ ಏನೆಲ್ಲಾ ಆಗುತ್ತಾನೆ ಎಂಬುದೇ ಪಿಂಕ್ ನೋಟು ಸಿನಿಮಾದ ಕಥೆ‌. ನಿರ್ದೇಶಕರು ಮಂಗಳೂರಿನಲ್ಲಿ ನಡೆದಿರುವಂತಹ ನಿಜವಾದ ಘಟನೆಯನ್ನು ಸಿನಿಮಾ ಮಾಡುತ್ತಿದ್ದಾರೆ.

“ಸುಮಾರು 12 ವರ್ಷಗಳ ಹಿಂದೆ ಅಂದರೆ 2010 ರಂದು ಮಂಗಳೂರಿನಲ್ಲಿ ನಡೆದಿರುವಂತಹ ಘಟನೆಯನ್ನು ನಿರ್ದೇಶಕರು ಹೇಳಿದಾಗ ನನಗೆ ತುಂಬಾ ಖುಷಿಯಾಯಿತು. ಎಲ್ಲದಕ್ಕಿಂತಲೂ ಮುಖ್ಯವಾಗಿ ದ್ವಿಪಾತ್ರ ದಲ್ಲಿ ಕಾಣಿಸಿಕೊಳ್ಳುವುದು ನಿಜವಾಗಿಯೂ ಸವಾಲಿನ ಕೆಲಸ. ಇಂತಹ ಸವಾಲಿನ ಕೆಲಸ ಥ್ರಿಲ್ ನೀಡುತ್ತದೆ” ಎಂದಿದ್ದಾರೆ ಭಾವನಾ ಮೆನನ್.

ಅಮ್ಮ ಎಂಟರ್ ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ತಯಾರಾಗಲಿರುವ ಈ ಸಿನಿಮಾದ ಮುಹೂರ್ತ ಇದೇ ಬುಧವಾರ ಬೆಂಗಳೂರಿನಲ್ಲಿ ನಡೆದದ್ದು ಶಿವಮೂರ್ತಿ ಮುರಘಾ ಶರಣರು ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.