• June 18, 2022

ಪಾತ್ರ ಯಾವುದೇ ನೀಡಿ, ನಟಿಸಲು ಸುಷ್ಮಾ ರೆಡಿ

ಪಾತ್ರ ಯಾವುದೇ ನೀಡಿ, ನಟಿಸಲು ಸುಷ್ಮಾ ರೆಡಿ

ಸುಷ್ಮಾ ಶೇಖರ್ ಮತ್ತೆ ಮರಳಿದ್ದಾರೆ… ಅರೇ ಯಾವ ಸುಷ್ಮಾ ಎಂದು ಕನ್ ಫ್ಯೂಸ್ ಆಗ್ತಿದ್ದೀರಾ? ಹಾಗಿದ್ರೆ ಇಲ್ಲಿ ಕೇಳಿ… ಕಿರುತೆರೆ ವೀಕ್ಷಕರ ಪಾಲಿನ ಮನೆ ಮಗಳು, ನಿಮ್ಮ ನೆಚ್ಚಿನ ಬೆಳ್ಳಿ ಮತ್ತೆ ಕಿರುತೆರೆಯತ್ತ ಮರಳಿದ್ದಾಳೆ. ಯಾರೇ ನೀ ಮೋಹಿನಿ ಧಾರಾವಾಹಿಯಲ್ಲಿ ನಾಯಕಿ ಬೆಳ್ಳಿ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಸುಷ್ಮಾ ಶೇಖರ್ ಇದೀಗ ನೇಹಾ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಕನ್ನಡ ಸೊಬಗಿನ ಕಥೆಯನ್ನೊಳಗೊಂಡ ಗಿಣಿರಾಮ ಧಾರಾವಾಹಿಯಲ್ಲಿ ನಾಯಕ ಶಿವರಾಮ ನ ಮಾಜಿ ಪ್ರೇಯಸಿ ನೇಹಾ ಆಗಿ ನಟಿಸುತ್ತಿದ್ದಾರೆ ಸುಷ್ಮಾ ಶೇಖರ್. ಅಂದ ಹಾಗೇ ಇದು ಕೇವಲ ಅತಿಥಿ ಪಾತ್ರವೋ ಅಥವಾ ಇನ್ನು ಮುಂದೆ ಇಡೀ ಧಾರಾವಾಹಿಯುದ್ದಕ್ಕೂ ನೇಹಾ ಪಾತ್ರ ಇದರಲಿದೆಯೋ ಎಂಬ ಪ್ರಶ್ನೆಗೆ ಉತ್ತರ ಸಿಗಬೀಕಿದೆ.

ಬೆಳ್ಳಿಯಾಗಿ ರಂಚಿಸಿದ್ದ ಸುಷ್ಮಾ ಶೇಖರ್ ಧಾರಾವಾಹಿ ಮುಗಿದ ಮೇಲೆ ಎಲ್ಲೂ ಕಂಡಿರಲಿಲ್ಲ.‌ ಧಾರಾವಾಹಿ ಮುಗಿದು ವರ್ಷ ಒಂದು ಕಳೆದ ಮೇಲೆ ಈಕೆ ಮತ್ತೆ ಬಣ್ಣ ಹಚ್ಚಿರುವುದು ಸೀರಿಯಲ್ ಪ್ರಿಯರಿಗೆ ಖುಷಿ ತಂದಿದೆ. ಮನೋಜ್ಞ ನಟನೆಯ ಮೂಲಕ ಕರುನಾಡಿನ ಮನೆಮಗಳು ಎಂದೇ ಗುರುತಿಸಲ್ಪಡುವ ಸುಷ್ಮಾ ಶೇಖರ್ ನಟಿಸಿದ್ದು ಎರಡು ಮೂರು ಧಾರಾವಾಹಿಯಲ್ಲಿ ಮಾತ್ರ. ಆದರೆ ಆ ಪಾತ್ರ, ಆಕೆಯ ನಟನೆ ವೀಕ್ಷಕರ ಮನದಲ್ಲಿ ಅಚ್ಚೊತ್ತಿಬಿಟ್ಟಿತ್ತು.

ಸುಷ್ಮಾ ಶೇಖರ್ ಅವರು ಇಂದು ನಟನೆಯಲ್ಲಿ ಸಕ್ರಿಯರಾಗಿದ್ದಾರೆ, ನಟಿಯಾಗಿ ನಿಮ್ಮನ್ನು ರಂಜಿಸುತ್ತಿದ್ದಾರೆ ಎಂದರೆ ಅದಕ್ಕೆ ಅವರ ಅಕ್ಕ ಕಾರಣ. ಸುಷ್ಮಾ ಅಕ್ಕ ಸುಮಾ ಅದಾಗಲೇ ನಟಿಯಾಗಿ ಮೋಡಿ ಮಾಡುತ್ತಿದ್ದರು. ಅದುವೇ ಸುಷ್ಮಾ ಅವರಿಗೂ ವರದಾನವಾಯಿತು.

ವೆಂಕಟೇಶ್ವರ ಮಹಿಮೆ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸುಷ್ಮಾ ಶೇಖರ್ ಮುಂದೆ ಕುಸುಮಾಂಜಲಿ ಧಾರಾವಾಹಿಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮೊದಲಿನಿಂದಲೂ ಒಂದು ಹೆಜ್ಜೆ ಮುಂದಿದ್ದ ಕಾರಣ ಸುಷ್ಮಾ ಅವರಿಗೆ ನಟನೆ ಕಲಿಯುವುದು ಕಷ್ಟ ಏನು ಆಗಲಿಲ್ಲ.

ಲಕುಮಿ ಧಾರಾವಾಹಿಯಲ್ಲಿ ನಾಯಕಿ ಲಕುಮಿ ಆಗಿ ಕಾಣಿಸಿಕೊಂಡು, ವೀಕ್ಷಕರ ಮನ ಗೆದ್ದ ಸುಷ್ಮಾ ಮುಂದೆ ಕನಕ ಧಾರಾವಾಹಿಯ ಕನಕ ಆಗಿ ಜನರಿಗೆ ಮಗದಷ್ಟು ಹತ್ತಿರವಾದರು. ಕನಕ ಧಾರಾವಾಹಿಯ ನಂತರ ಓದಿನ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡರು ಸುಷ್ಮಾ. ಬಿಬಿಎ ಪದವಿ ಮುಗಿಸಿಕೊಂಡ ಬಳಿಕ ಬೆಳ್ಳಿಯಾಗಿ ನಟನೆಗೆ ಹಿಂತಿರುಗಿದರು.

ಇದೀಗ ನೇಹಾ ಆಗಿ ಮಿಂಚುತ್ತಿರುವ ಸುಷ್ಮಾ ಶೇಖರ್ ” ಪಾತ್ರ ಯಾವುದೇ ದೊರಕಲಿ, ನಾನು ಅದನ್ನು ಸಂತಸದಿಂದಲೇ ಸ್ವೀಕರಿಸುತ್ತೇನೆ. ನೇಹಾ ಆಗಿ ನಿಮ್ಮನ್ನು ರಂಜಿಸುವ ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗುತ್ತಿದೆ. ನಾನಿಂದು ಬಣ್ಣದ ಲೋಕದಲ್ಲಿ ಮೋಡಿ ಮಾಡುತ್ತಿದ್ದೇನೆ. ನಟಿಯಾಗಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಅಪ್ಪ ಹಾಗೂ ಅಮ್ಮ ನೀಡಿದ ಪ್ರೋತ್ಸಾಹ, ಬೆಂಬಲವೇ ಕಾರಣ” ಎಂದು ಹೇಳುತ್ತಾರೆ ಸುಷ್ಮಾ ಶೇಖರ್.