- June 9, 2022
ಒಟಿಟಿ ಕಡೆಗೆ ಹೊರಟ ‘ಅವತಾರ ಪುರುಷ’


‘ಸ್ಯಾಂಡಲ್ವುಡ್ ಅಧ್ಯಕ್ಷ’ ಶರಣ್ ಹಾಗು ತಮ್ಮದೇ ವಿಶೇಷ ಅಭಿಮಾನಿ ಬಳಗ ಹೊಂದಿರೋ ನಿರ್ದೇಶಕ ಸಿಂಪಲ್ ಸುನಿ ಅವರ ಕಾಂಬಿನೇಶನ್ ನಲ್ಲಿ ಮೂಡಿಬಂದ ಮೊದಲ ಸಿನಿಮಾ ‘ಅವತಾರ ಪುರುಷ’. ಬಿಡುಗಡೆಗೂ ಮುನ್ನವೇ ತನ್ನ ವಿಭಿನ್ನ ರೀತಿಯ ಹಾಡುಗಳು ಹಾಗು ಟ್ರೈಲರ್ ನಿಂದ ಜನಪ್ರಿಯವಾಗಿದ್ದ ಸಿನಿಮಾ ಮೇ 6ರಂದು ಚಿತ್ರಮಂದಿರಗಳನ್ನು ಪ್ರವೇಶಿಸಿತ್ತು. ಸುನಿ ಅವರ ಹಾಸ್ಯದ ಎಳೆಯಲ್ಲೇ ವಾಮಾಚಾರದ ಬಗೆಗಿನ ಕಥೆ ಹೇಳಿದ್ದ ಸಿನಿಮಾ ಜನರ ಮುಖದಲ್ಲಿ ನಗು ತರಿಸುತ್ತ ಜನಮನ್ನಣೆ ಪಡೆದಿತ್ತು. ಚಿತ್ರಮಂದಿರಗಳಲ್ಲಿ ಭರ್ಜರಿ 25ದಿನಗಳನ್ನ ಪೂರೈಸಿದ ಸಿನಿಮಾ ಇದೀಗ ಒಟಿಟಿ ಕಡೆಗೆ ಲಗ್ಗೆ ಇಡುತ್ತಿದೆ.






ಚಿತ್ರರಂಗದ ಪರದೆ ಮೇಲೆ ಈಗಲೂ ಕೂಡ ಪ್ರದರ್ಶನ ನೀಡುತ್ತಿರೋ ‘ಅವತಾರ ಪುರುಷ’ ಇದೀಗ ಅಮೆಜಾನ್ ಪ್ರೈಮ್ ವಿಡಿಯೋಗೆ ಬಂದು ಸೇರಲಿದೆ. 25ದಿನಗಳ ಯಶಸ್ವಿ ಪ್ರದರ್ಶನ ಪಡೆದು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ ಈ ಸಿನಿಮಾ ಇದೇ ಜೂನ್ 14ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಆಗದೆ ಹೋದವರು ಜೂನ್ 14ರಿಂದ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ನೋಡಬಹುದಾಗಿದೆ. ಶರಣ್ ಅವರ ಜೊತೆಗೆ ಸಿನಿಮಾದಲ್ಲಿ ಆಶಿಕಾ ರಂಗನಾಥ್, ಸಾಯಿಕುಮಾರ್, ಶ್ರೀನಗರ ಕಿಟ್ಟಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.




‘ಅವತಾರ ಪುರುಷ’ ಒಂದು ಸರಣಿ ಚಿತ್ರ. ಎರಡು ಭಾಗಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದ್ದು, ಈಗ ತೆರೆಕಂಡಿರುವ ಭಾಗಕ್ಕೆ ‘ಅಷ್ಟದಿಗ್ಭಂದನ ಮಂಡಲಕ’ ಎಂದು ಹೆಸರು. ಎರಡನೇ ಭಾಗಕ್ಕೆ ‘ತ್ರಿಶಂಕು ಪಯಣ’ ಎಂದು ಹೆಸರಿಡಲಾಗಿದ್ದು, ಬಹುಪಾಲು ಚಿತ್ರೀಕರಣ ಕೂಡ ಸಂಪೂರ್ಣವಾಗಿದೆ. ಆದಷ್ಟು ಬೇಗ ಎರಡನೇ ಭಾಗವನ್ನು ತೆರೆಕಾಣಿಸೋ ಭರದಲ್ಲಿದೆ ಚಿತ್ರತಂಡ. ಸದ್ಯ ಜೂನ್ 14ರಿಂದ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ನೋಡಲು ಸಿಗುವ ಮೊದಲನೇ ಭಾಗದಲ್ಲಿ ಎರಡನೇ ಭಾಗದ ಬಗೆಗಿನ ಮೂಲಕಥೆಯನ್ನು ಹೇಳಲಾಗಿದೆ.








