• May 11, 2022

‘ಅವತಾರ ಪುರುಷ’ನ ಅವತರಣಿಕೆ

‘ಅವತಾರ ಪುರುಷ’ನ ಅವತರಣಿಕೆ

ಸಿಂಪಲ್ ಸುನಿ ಎಂಬ ಹೆಸರು ಕೇಳಿದ ತಕ್ಷಣ ಸಿನಿಪ್ರಿಯರಿಗೆ ನೆನಪಾಗುವುದು, ಸಿಂಪಲ್ ಸನ್ನಿವೇಶಗಳಲ್ಲೂ ನಗು ತರಿಸುವ ಅವರ ಸಂಭಾಷಣೆಗಳು, ಅಷ್ಟೇ ಸಿಂಪಲ್ ಆಗಿ ಮನದಲ್ಲೇ ಉಳಿದುಕೊಳ್ಳೋ ಲವ್ ಸ್ಟೋರಿಗಳು. ಆದರೆ ಈ ಬಾರಿಯ ‘ಅವತಾರ ಪುರುಷ’ನಲ್ಲಿ ಕಂಡದ್ದು ಹೊಸ ಸುನಿ ಅವರನ್ನ ಅನ್ನಿಸೋದು ಖಂಡಿತ. ಶರಣ್ ಹಾಗು ಸುನಿ ಅವರ ಜೋಡಿ ಪ್ರೇಕ್ಷಕರ ಮನಸಿನಲ್ಲಿ ಒಂದು ಸುತ್ತಿನ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.

ಒಂದು ಕುಟುಂಬ. ಅದರಲ್ಲೊಬ್ಬ ಕಳೆದು ಹೋಗಿರೋ ಮಗ ಕರ್ಣ. ಆ ಹುಡುಗ ಕಾಣೆಯಾದಾಗಿನಿಂದ ಮನೆ ಒಡೆದುಹೋಗಿರತ್ತೆ. ಮತ್ತೆ ಒಂದುಗೂಡಿಸೋ ಉದ್ದೇಶ ಇಟ್ಟುಕೊಂಡು, ಅವನ ಅತ್ತೆ ಮಗಳು,ನಾಯಕಿ ಸಿರಿ(ಆಶಿಕಾ ರಂಗನಾಥ್), ಡೂಪ್ಲಿಕೇಟ್ ಕರ್ಣ ಒಬ್ಬನನ್ನ ಕರೆದುಕೊಂಡೋ ಹೋಗೋ ಉಪಾಯ ಮಾಡ್ತಾಳೆ. ಆಗ ಸಿಗುವವನು ಜೂನಿಯರ್ ಆರ್ಟಿಸ್ಟ್ ಅನಿಲ(ಶರಣ್). ಅವನನ್ನ ಆ ಮನೆಗೆ ಕರೆದುಕೊಂಡು ಹೋದಮೇಲೆ ಅಲ್ಲಾಗೋ ತಾಪತ್ರಯಗಳೇನು, ಆ ಮನೆ ಆ ಊರು ಅಲ್ಲಿರೋ ರಹಸ್ಯಗಳೇನು. ಇದೆಲ್ಲದರ ನಡುವೆ ಸುತ್ತುವ ಕುತೂಹಲ ತುಂಬಿದ ಹಾಸ್ಯಪಯಣವೇ ಈ ‘ಅವತಾರ ಪುರುಷ’. ತ್ರಿಶಂಕು ಸ್ವರ್ಗ, ತ್ರಿಶಂಕು ಮಣಿ, ಅಷ್ಟದಿಗ್ಬಂಧನ ಹೀಗೆ ಹಲವಾರು ಅಂಶಗಳನ್ನು ಹೊಂದಿರೋ ಒಂದೊಳ್ಳೆ ಕಥೆ ಚಿತ್ರದಲ್ಲಿದೆ. ಶರಣ್ ಹಾಗು ಆಶಿಕಾರವರ ಜೊತೆ, ಸುಧಾರಾಣಿ, ಭವ್ಯ, ಸಾಯಿಕುಮಾರ್,ಶ್ರೀನಗರ ಕಿಟ್ಟಿ, ಸಾಧು ಕೋಕಿಲ ಮುಂತಾದ ದೊಡ್ಡ ದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದೆ. ಮಾಟ-ಮಂತ್ರ ವಾಮಾಚಾರಗಳ ಬಗೆಗೆ ಒತ್ತು ಕೊಡೊ ಕಥೆಯನ್ನ ಇಟ್ಟುಕೊಂಡಿರೋ ನಿರ್ದೇಶಕರು, ಆ ಎಲ್ಲ ವಿಷಯಗಳಿಗೆ ತಕ್ಕ ಗೌರವವನ್ನು ನೀಡಿದ್ದಾರೆ.

ಓವರ್ ಆಕ್ಟಿಂಗ್ ಅನಿಲ ಎಂಬ ಪಾತ್ರವನ್ನ ಅದ್ಭುತವಾಗಿ ತೆರೆಮೇಲೆ ತಂದಿದ್ದಾರೆ ಶರಣ್ ಅವರು. ಮಾಂತ್ರಿಕರ ಪಾತ್ರದಲ್ಲಿ ಬಾಲಾಜಿ ಮನೋಹರ್ ಹಾಗು ಅಶುತೋಷ್ ರಾಣ ಅವರು ಮೈ ನವೀರೇಳಿಸುತ್ತಾರೆ. ಶಿಸ್ತಿನ ಪಾತ್ರದಲ್ಲಿ ಸಾಯಿಕುಮಾರ್ ಅವರು, ಅಯ್ಯಪ್ಪ ಹಾಗು ಬಿ ಸುರೇಶ್ ಅವರು ತಮ್ಮ ತಮ್ಮ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ. ಅರ್ಜುನ್ ಜನ್ಯ ಅವರ ಹಿನ್ನೆಲೆ ಸಂಗೀತ ಒಂದಷ್ಟು ದೃಶ್ಯಗಳ ತೂಕ ಹೆಚ್ಚಿಸುತ್ತವೆ. ಇನ್ನು ಹಾಡುಗಳು ಚಿತ್ರಮಂದಿರದಿಂದ ಹೊರಬರುವ ವೇಳೆ ನಮ್ಮಲ್ಲೇ ಗುನುಗುತ್ತಿರುತ್ತವೆ. ಸಿನಿಮಾ ಮುಗಿಯುವಂತ ಸಂಧರ್ಭದಲ್ಲಿ ಬರುವಂತಹ ಶ್ರೀನಗರ ಕಿಟ್ಟಿಯವರ ‘ಕುಮಾರ’ ಅವತಾರ ಹಾಗು ಅಂತ್ಯದ ಒಂದಷ್ಟು ಸನ್ನಿವೇಶಗಳು ಹಾಗು ಟ್ವಿಸ್ಟ್ ಗಳು ಬರುತ್ತಿರೋ ಎರಡನೇ ಅಧ್ಯಾಯಕ್ಕೆ ಪ್ರೇಕ್ಷಕನನ್ನ ಕಾಯುವಂತೆ ಮಾಡುತ್ತವೆ.

ಆದರೆ ಸುನಿ ಅವರ ಮುಖ್ಯಶಕ್ತಿಯಾದ ಆ ಒಂದೇ ಒಂದು ಸಾಲುಗಳ ನಗು ತರಿಸೋ ಡೈಲಾಗ್ ಗಳು ಒಂದಷ್ಟು ಕಡಿಮೆ ಇದ್ದವು. ಪ್ರಾಯಷಃ ಅವರ ಹಿಂದಿನ ಚಿತ್ರಗಳಷ್ಟು ನಗು ಈ ಚಿತ್ರದಲ್ಲಿ ಅವರ ಅಭಿಮಾನಿಗೆ ಸಿಗಲಿಲ್ಲ ಎನ್ನಬಹುದೇನೋ!! ಆದರೆ ಎರಡೂವರೆ ಗಂಟೆಗಳ ಕಾಲದ ಮನೋರಂಜನೆಗೆ ಯಾವ ಕೊರತೆಯೂ ಚಿತ್ರದಲ್ಲಿರಲಿಲ್ಲ. ‘ಅಷ್ಟದಿಗ್ಬಂಧನ ಮಂಡಲಕ’ ಎಂಬ ಮೊದಲ ಅಧ್ಯಾಯವನ್ನ ನಮಗೆ ನೀಡಿರೋ ಸುನಿ ಅವರು ಬಹುಪಾಲು ಚಿತ್ರೀಕರಣವನ್ನ ಮುಗಿಸಿಕೊಂಡಿರೋ ‘ತ್ರಿಶಂಕು ಪಯಣಮ್’ ಎಂಬ ಎರಡನೇ ಅಧ್ಯಾಯವನ್ನು ಯಾವಾಗ ನೀಡುತ್ತಾರೆ ಎಂದು ಕಾಯುತ್ತಿದೆ ಸಿನಿರಸಿಕರ ಮನಸ್ಸು.