- April 8, 2022
ಪಿ ಆರ್ ಕೆ ಪ್ರೊಡಕ್ಷನ್ ನಿಂದ ಹತ್ತನೇ ಸಿನಿಮಾ ಘೋಷಣೆ.. ಟೈಟಲ್ ಏನು ಗೊತ್ತಾ?


ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸು ಪಿಆರ್ ಕೆ ಪ್ರೊಡಕ್ಷನ್ ನಿಂದ ಈಗ ಹೊಸ ಸಿನಿಮಾ ಘೋಷಣೆ ಆಗಿದೆ. “ಆಚಾರ್ ಆಂಡ್ ಕೋ” ಸಿನಿಮಾ ಪಿಆರ್ ಕೆ ಪ್ರೊಡಕ್ಷನ್ ನಿಂದ ಮೂಡಿಬರುತ್ತಿರುವ ಹತ್ತನೇ ಸಿನಿಮಾ ಹೌದು.


ಆಚಾರ್ ಆಂಡ್ ಕೋ ಸಿನಿಮಾ 1970ರ ದಶಕದ ಕಥೆಯನ್ನು ಹೊಂದಿದ್ದು, ಆ ಕಾಲದ ಬೆಂಗಳೂರನ್ನು ತೋರಿಸುವ, ಆಗಿನ ಮನುಷ್ಯ ಸಂಬಂಧವನ್ನು ಮತ್ತೆ ಕಟ್ಟಿ ಕೊಡುವ ಯತ್ನ ಮಾಡಲಿದೆ. ಈ ಸಿನಿಮಾದಲ್ಲಿ ಮಹಿಳೆಯರೇ ಕೆಲಸ ಮಾಡುತ್ತಿರುವುದು ವಿಶೇಷ.


ಈ ಸಿನಿಮಾವನ್ನು ನಿರ್ದೇಶಕಿ ಸಿಂಧು ಶ್ರೀನಿವಾಸ ಮೂರ್ತಿ ನಿರ್ದೇಶಿಸಲಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕಿ ಬಿಂದು ಮಾಲಿನಿ ಸಂಗೀತ ನೀಡಲಿದ್ದಾರೆ. ಕ್ರಿಯೇಟಿವ್ ಪ್ರೊಡ್ಯೂಸರ್ ಡಾನ್ನೆಲಾ ಕೊರ್ರೆಯಾ, ಸ್ಟೈಲಿಸ್ಟ್ ಇಂಚರ ಸುರೇಶ್ , ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಮಹಿಳೆಯರೇ ಹೊರಲಿದ್ದಾರೆ. ಗುರುದತ್ ಎ ತಲ್ವಾರ್ ಈ ಸಿನಿಮಾದ ಸಹ ನಿರ್ಮಾಪಕರಾಗಿದ್ದಾರೆ.


ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ಅಶ್ವಿನಿ “ಆಚಾರ್ ಅಂಡ್ ಕೋ ಪಿಆರ್ ಕೆ ಪ್ರೊಡಕ್ಷನ್ ನ ಹತ್ತನೇ ಚಿತ್ರ. 60ನೇ ದಶಕದ ಬೆಂಗಳೂರನ್ನು ನಿಮ್ಮ ಮುಂದೆ ತರಲು ಒಂದು ಪ್ರಯತ್ನ. ಇದು ನಮ್ಮ ಸಂಸ್ಥೆಯಿಂದ ಮಹಿಳಾ ನಿರ್ದೇಶನದ ಮೊದಲ ಚಿತ್ರ ಆಗಿದ್ದು, ಮುಂಚೂಣಿಯಲ್ಲಿ ಹಲವು ಮಹಿಳೆಯರನ್ನು ಸಹ ಒಳಗೊಂಡಿದೆ “ಎಂದಿದ್ದಾರೆ.


ಅಪ್ಪು ಅವರ ಕನಸನ್ನು ಈಡೇರಿಸಲು ಅಶ್ವಿನಿ ಪಣ ತೊಟ್ಟಿದ್ದಾರೆ. ಈಗಾಗಲೇ ಈ ಬ್ಯಾನರ್ ಅಡಿಯಿಂದ ಬಿಡುಗಡೆಗೆ 3 ಚಿತ್ರಗಳು ತಯಾರಾಗಿವೆ. ಮ್ಯಾನ್ ಆಫ್ ದಿ ಮ್ಯಾಚ್, ಗಂಧದ ಗುಡಿ ಹಾಗೂ ಓ2 ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.








