• July 13, 2022

ಅರ್ಜುನ್ ಜನ್ಯ ನಿರ್ದೇಶನಕ್ಕೆ ವಿಭಿನ್ನ ಶೀರ್ಷಿಕೆ.

ಅರ್ಜುನ್ ಜನ್ಯ ನಿರ್ದೇಶನಕ್ಕೆ ವಿಭಿನ್ನ ಶೀರ್ಷಿಕೆ.

‘ಸಂಗೀತ ಮಾಂತ್ರಿಕ’ ಎಂದೇ ಖಾತ್ರಿಯಾಗಿರುವವರು ಕನ್ನಡದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ. ತಮ್ಮ ಸುಮಧುರ ಹಾಡುಗಳು ಹಾಗು ಸಂಗೀತದಿಂದ ಕನ್ನಡಿಗರ ಮನದಲ್ಲಿ ಮನೆ ಮಾಡಿಕೊಂಡಿರುವವರು ಇವರು. ಸುಮಾರು ಒಂದು ದಶಕದಿಂದ ಕನ್ನಡಕ್ಕೆ ಹಲವು ಅದ್ಭುತ ಸಂಗೀತದ ಕಾಣಿಕೆಗಳನ್ನು ನೀಡಿರುವ ಇವರು ಇದೀಗ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಇವರ ಮೊದಲ ಚಿತ್ರಕ್ಕೆ ‘ಹ್ಯಾಟ್ರಿಕ್ ಹೀರೋ’ ಶಿವಣ್ಣ ನಾಯಕರು. ಇಂದು ಶಿವಣ್ಣನ ಜನ್ಮದಿನದ ಪ್ರಯುಕ್ತ ಸಿನಿಮಾದ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದೆ.

‘ಸೂರಜ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಎಂ ರಮೇಶ್ ರೆಡ್ಡಿ ಅವರು ನಿರ್ಮಿಸುತ್ತಿರುವ ಈ ಸಿನಿಮಾಗೆ ’45’ ಎಂದು ಹೆಸರಿಡಲಾಗಿದೆ. ಅರ್ಜುನ್ ಜನ್ಯ ಅವರೇ ರಚಿಸಿ ನಿರ್ದೇಶಿಸುತ್ತಿರುವ ಒಂದು ರಾಜಕೀಯ ಡ್ರಾಮಾ ರೀತಿಯ ಕಥೆ ಇದಾಗಿರಲಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿದೆ. “ನಾನು ಚಿಕ್ಕಂದಿನಿಂದ ಮಣಿರತ್ನಮ್ ಅವರ ಅಭಿಮಾನಿ. ಅವರ ಸಿನಿಮಾಗಳು ನನ್ನನ್ನು ರೋಮಾಂಚಿತಗೊಳಿಸುತ್ತಿದ್ದವು. ನಿರ್ದೇಶನ ಮಾಡಬೇಕು ಎನ್ನುವುದು ನನ್ನ ಬಹುಕಾಲದ ಕನಸು. ನನ್ನ ಮೊದಲ ಸಿನಿಮಾವನ್ನು ಶಿವಣ್ಣನ ಜೊತೆ ಮಾಡುತ್ತಿರುವುದು ನನ್ನ ಭಾಗ್ಯ ಎಂದುಕೊಳ್ಳುತ್ತೇನೆ” ಎನ್ನುತ್ತಾರೆ ಅರ್ಜುನ್. ನಂಬರ್ ಗಳೇ ಲೆಕ್ಕಕ್ಕಿರದ ಶಿವಣ್ಣನ ಸಿನಿಮಾಗೆ ’45’ ಎಂಬ ನಂಬರ್ ಅನ್ನೇ ಶೀರ್ಷಿಕೆಯಾಗಿ ಇಟ್ಟಿರುವುದು ಎಲ್ಲೆಡೆ ಕುತೂಹಲ ಕೆರಳಿಸಿದೆ. ಸಿನಿಮಾ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗು ಮಲಯಾಳಂ ಭಾಷೆಗಳಲ್ಲಿ ತೆರೆಕಾಣುತ್ತಿದೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಲಿದ್ದು, ತಾರಾಗಣ, ಚಿತ್ರೀಕರಣ ಯಾವುದರ ಬಗೆಗೂ ಹೆಚ್ಚಿನ ಮಾಹಿತಿ ಸದ್ಯ ಚಿತ್ರತಂಡ ನೀಡಿಲ್ಲ.